ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸರ್ಕಾರಿ ಕಾರ್ಯಕ್ರಮ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು, ಪಕ್ಷದ ಚುನಾವಣಾ ಟಾಸ್ಕ್ ಪರಿಶೀಲನೆ ನಡೆಸಲಿದ್ದು, ರಾಜ್ಯ ನಾಯಕರಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಿದ್ದಾರೆ.
ಜನವರಿ 27 ರ ರಾತ್ರಿ 10.30 ಕ್ಕೆ ಹುಬ್ಬಳ್ಳಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂದು ರಾತ್ರಿ ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಈ ವೇಳೆ ಪಕ್ಷದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ. ಕಳೆದ ಬಾರಿ ಮಂಡ್ಯ ಮತ್ತು ಬೆಂಗಳೂರು ಪ್ರವಾಸಕ್ಕೆ ಆಗಮಿಸಿದ್ದ ವೇಳೆ ರಾಜ್ಯದ ನಾಯಕರಿಗೆ ಕೆಲವೊಂದು ಟಾಸ್ಕ್ ನೀಡಿದ್ದು. ಅದರ ಪ್ರಗತಿ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಚುನಾವಣಾ ಸಿದ್ಧತೆಗೆ ಸಂಬಂಧಪಟ್ಟಂತೆ ಮಹತ್ವದ ಸಭೆ ನಡೆಸಿ ಪ್ರಚಾರ ತಂತ್ರದ ಕುರಿತು ಮಾತುಕತೆ ನಡೆಸಲಿದ್ದಾರೆ. ಜನವರಿ 28 ರಂದು ಬೆಳಗ್ಗೆ 11 ಗಂಟೆಗೆ ಕೆಎಲ್ಇ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಶಾ, ಬಳಿಕ ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸರ್ಕಾರಿ ಕಾರ್ಯಕ್ರಮದ ನಂತರ ಪಕ್ಷದ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. 28 ರಂದು ಮಧ್ಯಾಹ್ನ 1 ಗಂಟೆಗೆ ಕುಂದಗೋಳದಲ್ಲಿ ನಡೆಯಲಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು, ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಬೆಳಗಾವಿ ಜಿಲ್ಲೆಯ ಎಂಕೆ ಹುಬ್ಬಳ್ಳಿಯಲ್ಲಿ ಸಂಜೆ 4 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದ್ದು, ಬೈಲಹೊಂಗಲ, ಕಿತ್ತೂರು, ಖಾನಾಪುರ ಕ್ಷೇತ್ರ ವ್ಯಾಪ್ತಿ ಕೇಂದ್ರೀಕರಿಸಿ ಆಯೋಜಿಸಿರುವ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಅಮಿತ್ ಶಾ ರಾಜ್ಯ ಪ್ರವಾಸದ ಹಿನ್ನಲೆಯಲ್ಲಿ ಕಾರ್ಯಕ್ರಮಗಳ ಸಿದ್ಧತಾ ಕಾರ್ಯದ ಕುರಿತು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥಭವನದಲ್ಲಿ ಪದಾಧಿಕಾರಿಗಳ ಸಭೆ ನಡೆಸಲಾಯಿತು. ವಿಜಯ ಸಂಕಲ್ಪ ಯಾತ್ರೆಗೆ ಮಾಡಿಕೊಂಡಿರುವ ಸಿದ್ಧತೆಗಳು ಮತ್ತು ಸಮಾವೇಶ ಆಯೋಜನೆ ಕುರಿತು ನಡೆದಿರುವ ತಯಾರಿಗಳ ಕುರಿತು ಪರಿಶೀಲನೆ ನಡೆಸಲಾಯಿತು. ಅಮಿತ್ ಶಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಕುರಿತು ಚರ್ಚಿಸಲಾಯಿತು. ಮೋದಿ ಕಾರ್ಯಕ್ರಮದ ಯಶಸ್ಸಿನಂತೆ ಅಮಿತ್ ಶಾ ಕಾರ್ಯಕ್ರಮವನ್ನೂ ಯಶಸ್ವಿಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.