ಜಂತಕಲ್ ಮೈನಿಂಗ್ ಪ್ರಕರಣ: ಹೆಚ್ಡಿಕೆ ವಿರುದ್ಧ ಎಸ್ಐಟಿಯಿಂದ ದೋಷಾರೋಪ ಪಟ್ಟಿ - ಜಂತಕಲ್ ಮೈನಿಂಗ್ ಪ್ರಕರಣ
ಜಂತಕಲ್ ಮೈನಿಂಗ್ ಉರುಳು ಕುಮಾರಸ್ವಾಮಿಗೆ ಸುತ್ತಿಕೊಳ್ಳುತ್ತದೆಯೋ ಇಲ್ಲವೋ ಎಂಬ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈಗ ಹೆಚ್ಡಿಕೆ ವಿರುದ್ಧ ಎಸ್ಐಟಿ ಅಧಿಕಾರಿಗಳು ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಬೆಂಗಳೂರು: ಜಂತಕಲ್ ಮೈನಿಂಗ್ ಅಕ್ರಮ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಲೋಕಾಯುಕ್ತ ನ್ಯಾಯಲಯಕ್ಕೆ ಎಸ್ಐಟಿ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಎಸ್ಐಟಿ ತನಿಖಾಧಿಕಾರಿಗಳ ಮಾಹಿತಿ ಪ್ರಕಾರ ತನಿಖೆಯಲ್ಲಿ ಜಂತಕಲ್ ಮೈನಿಂಗ್ ಮಾಲೀಕ ವಿನೋದ್ ಗೋಯಲ್ಗೂ ಕುಮಾರಸ್ವಾಮಿಗೂ ಪೋನ್ ಸಂಭಾಷಣೆ ಬಿಟ್ಟರೆ ಬೇರೆ ಸಾಕ್ಷಿ ಇಲ್ಲ. ಕುಮಾರಸ್ವಾಮಿ ಕಿಕ್ ಬ್ಯಾಕ್ ಪಡೆದ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಬಹುತೇಕ ಕುಮಾರಸ್ವಾಮಿ ಅವರಿಗೆ ಕ್ಲೀನ್ ಚೀಟ್ ಸಿಗುತ್ತೆ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೆ ಕಂದವಾಡಿ ಗ್ರಾಮದಲ್ಲಿ 21/8/07 ರಿಂದ 14/2/2009 ರವರೆಗೆ ನಡೆದಿದ್ದ ಮೈನಿಂಗ್ ಹಗರಣವಿದು. ಮುಂಬೈ ಮೂಲದ ವಿನೋದ್ ಗೋಯಲ್ ಮಾಲಿಕತ್ವದ ಜಂತಕಲ್ ಕಂಪನಿ ಮೈನಿಂಗ್ ನಡೆಸಲು ಅನುಮತಿ ಕೋರಿತ್ತು. ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಖುದ್ದು ಕರೆ ಮಾಡಿ ಪರವಾನಗಿ ನೀಡುವಂತೆ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗಂಗರಾಮ್ ಬಡೇರಿಯಾಗೆ ಒತ್ತಡ ಹೇರಿದ್ದರು ಎನ್ನಲಾಗಿತ್ತು. ಹೀಗಾಗಿ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಬ್ರಾಂ ಎಸ್ಐಟಿಗೆ ದೂರು ನೀಡಿದ್ದರು.