ಬೆಂಗಳೂರು : ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಕೈಗೊಳ್ಳಲಿರುವ 'ಜನತಾ ಜಲಧಾರೆ' ಗಂಗಾ ರಥಯಾತ್ರೆಯ ಪೂರ್ವಸಿದ್ಧತೆ ನಿಮಿತ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 7 ಜಿಲ್ಲೆಗಳ ಮುಖಂಡರ ಜೊತೆ ಮಾತುಕತೆ ನಡೆಸಿದರು.
ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಇಂದು ಸಂಜೆ ನಡೆದ ಈ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ರಾಯಚೂರು, ವಿಜಯಪುರ, ಬಾಗಲಕೋಟೆ , ಕೊಪ್ಪಳ ಜಿಲ್ಲೆಗಳ ಮುಖಂಡರ ಜೊತೆ ಚರ್ಚೆನಡೆಸಿದರು.
ರಾಜ್ಯದ ಹದಿನೈದು ಪವಿತ್ರ ತಾಣಗಳಲ್ಲಿ ಜಲ ಸಂಗ್ರಹಣೆ ಮಾಡುವ ಈ ಗಂಗಾ ರಥಯಾತ್ರೆಯ ರೂಪುರೇಷೆ, ರೀತಿ ರಿವಾಜು, ಯಾತ್ರೆ ಸಾಗುವ ಹಾದಿ, ಗಂಗಾಪೂಜೆ, ಮೆರವಣಿಗೆ ಇತ್ಯಾದಿ ಅಂಶಗಳ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಮುಖಂಡರ ಜೊತೆ ಸಮಾಲೋಚಿಸಿದರು.