ಬೆಂಗಳೂರು:ರಾಜ್ಯಕ್ಕೆ ಕಳೆದ 75 ವರ್ಷಗಳಿಂದ ನೀರಾವರಿ ಕ್ಷೇತ್ರದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವ ಧ್ಯೇಯದೊಂದಿಗೆ ಜೆಡಿಎಸ್ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ 'ಜನತಾ ಜಲಧಾರೆ' ಗಂಗಾ ರಥಯಾತ್ರೆಯ ಸಂಕಲ್ಪ ಸಮಾವೇಶದ ದಿನಾಂಕ ಬದಲಿಸಲಾಗಿದೆ. ವಿಶೇಷವೆಂದರೆ, ಪ್ರತಿಯೊಂದು ಶುಭಗಳಿಗೆಗೂ ಮುಹೂರ್ತ ನಿಗದಿಗೊಳಿಸುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಸಂಕಲ್ಪ ಸಮಾವೇಶಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ.
ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೇ.8ಕ್ಕೆ ಸಂಕಲ್ಪ ಸಮಾವೇಶ ನಡೆಸಲು ತೀರ್ಮಾನಿಸಿದ್ದರು. ಆದರೆ, ಇದಕ್ಕಿಂತ ಶುಭದಿನ ಮೇ.13 ಎಂದು ರೇವಣ್ಣ ಅವರು ನೀಡಿದ ಸಲಹೆ ಮೇರೆಗೆ ಸಮಾವೇಶದ ದಿನಾಂಕವನ್ನು ಜೊತೆಗೆ ಸ್ಥಳ ಸಹ ಬದಲಾವಣೆ ಮಾಡಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಈ ಮೊದಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಕಲ್ಪ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಇದೀಗ ನೆಲಮಂಗಲ ಬಳಿಯ ಬೃಹತ್ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಸ್ಥಳ ಪರಿಶೀಲನೆ ಮಾಡಿದ ಹೆಚ್.ಡಿ.ಕುಮಾರಸ್ವಾಮಿ: ರಾಜ್ಯದ 15 ಸ್ಥಳಗಳಲ್ಲಿ ಜಲಸಂಗ್ರಹಿಸಿ ವಿವಿಧ ಜಿಲ್ಲೆಯಲ್ಲಿ ರಥಯಾತ್ರೆಗಳು ಪ್ರವಾಸ ಕೈಗೊಳ್ಳಲಾಗುತ್ತಿವೆ. ರಾಜ್ಯದಲ್ಲೆಡೆಯಿಂದ ಲಕ್ಷಾಂತರ ಜನ ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ. ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನ ಸ್ಥಳವು ಸಾಕಾಗುವುದಿಲ್ಲ ಎಂಬುದನ್ನು ಜೆಡಿಎಸ್ ನಾಯಕರು ಗಮನಿಸಿದರು. ಹೀಗಾಗಿ ನಗರದ ಹೊರವಲಯದಲ್ಲಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಸುವ ಆಲೋಚನೆ ಮಾಡಲಾಯಿತು. ಆದರೆ, ನೈಸ್ ಸಂಸ್ಥೆಗೂ ಜೆಡಿಎಸ್‌ಗೂ ಸರಿಹೊಂದುವುದಿಲ್ಲ ಎಂಬ ಕಾರಣಕ್ಕಾಗಿ ಆ ಸ್ಥಳವನ್ನು ಕೈಬಿಡಲಾಯಿತು. ಅಂತಿಮವಾಗಿ ನೆಲಮಂಗಲ ಬಳಿಯ ಬೃಹತ್ ಮೈದಾನದಲ್ಲಿ ನಡೆಸಲು ತೀರ್ಮಾನ ಕೈಗೊಂಡು ಸಿದ್ಧತೆ ಕಾರ್ಯ ಭರದಿಂದ ಸಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಸಹ ಈಗಾಗಲೇ ಸ್ಥಳ ಪರಿಶೀಲನೆ ಮಾಡಿ ಸಿದ್ಧತೆ ಕಾರ್ಯಗಳ ಕುರಿತು ವೀಕ್ಷಿಸಿದ್ದಾರೆ.