ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಕೇಸರಿ ಅಲೆ ಎಬ್ಬಿಸಲು ಬಿಜೆಪಿ ಮುಂದಾಗಿದ್ದು, ಜನಸಂಕಲ್ಪ ಯಾತ್ರೆಯನ್ನು ಆರಂಭಿಸುತ್ತಿದೆ. ನಾಳೆ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಆರಂಭಗೊಳ್ಳಲಿದೆ.
ನಾಳಿನ ಯಾತ್ರೆಯ ಆರಂಭದಲ್ಲಿ 50 ಸಾವಿರ ಜನ ಸೇರಲಿದ್ದು, ರಾಜ್ಯದಲ್ಲಿ ಎಲ್ಲರ ಗಮನ ಸೆಳೆಯುವ ಯಾತ್ರೆ ಇದಾಗಲಿದೆ. ಅ.12 ರಂದು ವಿಜಯನಗರ, ಕುಷ್ಟಗಿ, 13 ರಂದು ಹೂವಿನ ಹಡಗಲಿ, ಸಿರುಗುಪ್ಪದಲ್ಲಿ ಯಾತ್ರೆ ನಡೆಯಲಿದೆ.18 ರಂದು ಔರಾದ್ ಮತ್ತು ಹುಮ್ನಾಬಾದ್, 19 ರಂದು ಸುರಪುರ ಮತ್ತು ಕಲಬುರಗಿ ಗ್ರಾಮೀಣ, 23 ರಂದು ಚಿತ್ತಾಪುರ ಮತ್ತು ಆಳಂದದಲ್ಲಿ ಯಾತ್ರೆ ನಡೆಯಲಿದ್ದು, ಅಕ್ಟೋಬರ್ 30 ರಂದು ಕಲ್ಬುರ್ಗಿಯಲ್ಲಿ ಬೃಹತ್ ಒಬಿಸಿ ಸಮಾವೇಶ ನಡೆಸಲಾಗುತ್ತದೆ.
ವಾರದಲ್ಲಿ ಆರು ಕ್ಷೇತ್ರದಲ್ಲಿ ಯಾತ್ರೆ:ವಾರದಲ್ಲಿ ಮೂರು ದಿನ ಆರು ಕ್ಷೇತ್ರದಂತೆ ಯಾತ್ರೆ ನಡೆಯಲಿದೆ. ಕಟೀಲ್ ತಂಡ 50 ಕ್ಷೇತ್ರ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ತಂಡ 50 ಮತ್ತು ಅರುಣ್ ಸಿಂಗ್ 25 ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಡಿಸೆಂಬರ್ 25 ರೊಳಗೆ ಒಟ್ಟು 125 ಕ್ಷೇತ್ರ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಮತ್ತೊಂದು ಯಾತ್ರೆ ಎರಡನೇ ತಂಡದಿಂದ:ಕಲಬುರಗಿ ಒಬಿಸಿ ಸಮಾವೇಶದ ನಂತರ, ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡ ಸಮಾವೇಶ, ಮೈಸೂರಿನಲ್ಲಿ ಪರಿಶಿಷ್ಟ ಜಾತಿ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ, ಶಿವಮೊಗ್ಗದಲ್ಲಿ ಯುವಮೋರ್ಚಾ ಸಮಾವೇಶ ನಡೆಸಲಿದ್ದು, ಡಿ.31 ರೊಳಗೆ ಇದೆಲ್ಲಾ ಮುಗಿಯುವ ಗುರಿ ಇರಿಸಿಕೊಳ್ಳಲಾಗಿದೆ.