ಬೆಂಗಳೂರು:ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲು ಸೇರಿ 12 ವರ್ಷ ವನವಾಸ ಅನುಭವಿಸಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ವಂತ ಪಕ್ಷ ಘೋಷಿಸುವ ಮೂಲಕ ರಾಜ್ಯ ರಾಜಕೀಯಕ್ಕೆ ಮರು ಪ್ರವೇಶ ಮಾಡಿದ್ದಾರೆ. ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೊಸ ಪಕ್ಷ 'ಕಲ್ಯಾಣ ರಾಜ್ಯ ಪ್ರಗತಿ' ಅಭ್ಯರ್ಥಿಯಾಗಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಪ್ರಕಟಿಸಿದ್ದಾರೆ.
ಚಾಲುಕ್ಯ ವೃತ್ತದ ಸಮೀಪದಲ್ಲಿರುವ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನನ್ನ ಸಹೋದರನಂತಿರುವ ಸಚಿವ ಬಿ. ರಾಮುಲು, ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ ಸೇರಿ ಯಾರೊಬ್ಬರೂ ನನ್ನ ಜೊತೆ ಬರುವಂತೆ ಅಪೇಕ್ಷೆ ಪಡುತ್ತಿಲ್ಲ. ಅದೇ ರೀತಿ ಬೇರೆ ಪಕ್ಷದವರನ್ನೂ ಕರೆಯಲ್ಲ. ನನ್ನ ಕೆಲಸ ನೋಡಿ ಇವರು ಸಾಧನೆ ಮಾಡಲಿದ್ದಾರೆ ಎಂದು ನಂಬಿ ಯಾರು ನನ್ನ ಜೊತೆ ಹೆಜ್ಜೆ ಇಡುತ್ತಾರೋ ಅವರೆಲ್ಲಾ ನನ್ನವರು ಎಂದರು.
ಗಂಗಾವತಿಯಿಂದ ಸ್ಪರ್ಧೆ: ಮುಂಬರಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲಿದ್ದೇನೆ. ಈಗಾಗಲೇ ಗಂಗಾವತಿ ಕ್ಷೇತ್ರದಲ್ಲಿ ಮನೆ ಮಾಡಿದ್ದೇನೆ. ಅಲ್ಲಿಯೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದೇನೆ. ಗಂಗಾವತಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಕುತೂಹಲಕ್ಕೆ ರೆಡ್ಡಿ ತೆರೆ ಎಳೆದರು.
ನಾನು ಹೊಂದಾಣಿಕೆ ರಾಜಕಾರಣಿಯಲ್ಲ. ಹಾಗಾಗಿ ಚುನಾವಣೆಯಲ್ಲಿ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಜನರ ಆಶೀರ್ವಾದದೊಂದಿಗೆ ಮುಂದೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ಯಾರ ಮಾತು ಕೇಳಿಯೂ ನಾನು ಪಕ್ಷ ಕಟ್ಟುತ್ತಿಲ್ಲ. ಈಗಾಗಲೇ ನಮ್ಮ ಪಕ್ಷದ ಹೆಸರು ನೋಂದಾಯಿಸಲಾಗಿದೆ. ಇನ್ನು 10-15 ದಿನದಲ್ಲೇ ಮತ್ತೊಂದು ಸುದ್ದಿಗೋಷ್ಟಿ ನಡೆಸಿ ನಮ್ಮ ಹೊಸ ಪಕ್ಷದ ಚಿನ್ಹೆ, ಧ್ವಜ, ಕಾರ್ಯಾಲಯ, ಪ್ರಣಾಳಿಕೆ ಜೊತೆಗೆ ಬಹುತೇಕ ಅಭ್ಯರ್ಥಿಗಳ ಸಮ್ಮುಖದಲ್ಲಿ ಮುಂದಿನ ಕಾರ್ಯತಂತ್ರಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದೇನೆ ಎಂದು ತಿಳಿಸಿದರು.
ಸಿಬಿಐ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿ ಬಿಜೆಪಿಗೆ ಗುಡ್ ಬೈ:ಇದೇ ವೇಳೆ ರೆಡ್ಡಿ ಅವರು ಸಿಬಿಐ ವಿಚಾರಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ತಮ್ಮ ಮಗಳಿಗೆ ಹೆರಿಗೆ ಆದ ವೇಳೆ ಕೂಡ ಸಿಬಿಐನವರು ಮನೆಗೆ ಬಂದು ಫೋಟೋ ತೆಗೆದುಕೊಂಡು ಹೋದರು. 12 ವರ್ಷದ ನಂತರ ಬಳ್ಳಾರಿಗೆ ಬರಲು ಕೋರ್ಟ್ ಆದೇಶ ಕೊಟ್ಟರೂ ಮತ್ತೆ ನಮ್ಮನ್ನು ಬಳ್ಳಾರಿಯಿಂದ ಸಿಬಿಐ ಬಳಸಿ ಹೊರಹಾಕಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ವಾಜಪೇಯಿ ಸಿದ್ದಾಂತ ನಂಬಿದ್ದ ನಾನು ಇವತ್ತಿಗೆ ಬಿಜೆಪಿ ಜೊತೆಗಿನ ಸಂಬಂಧ ಬಿಡುತ್ತಿದ್ದೇನೆ. ಆ ಪಕ್ಷದ ಸದಸ್ಯ ಅಲ್ಲ ಎಂದರೂ ನಾನು ಆ ಪಕ್ಷದವನೇ ಎಂದು ಜನ ಅಂದುಕೊಂಡಿದ್ದರು. ಅದಕ್ಕೆ ಇಂದು ತೆರೆ ಎಳೆಯುತ್ತಿದ್ದೇನೆ. ಇನ್ನು ಮುಂದೆ ಬಿಜೆಪಿ ಜೊತೆಗೆ ಸಂಬಂಧ ಇಲ್ಲ. ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಸರಿನಲ್ಲಿ ಪಕ್ಷ ಆರಂಭಿಸುತ್ತೇನೆ. ನನ್ನದೇ ಆದ ಯೋಚನೆಗಳೊಂದಿಗೆ ಹೊಸ ಪಕ್ಷ ಕಟ್ಟುತ್ತೇನೆ. ಇಡೀ ಕರ್ನಾಟಕ ರಾಜ್ಯದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿರುವ ವೇಳೆ ಅದಕ್ಕೆ ಅವಕಾಶವಿಲ್ಲ ಎನ್ನುವ ಸಂದೇಶ ನೀಡುತ್ತಾ ಹೊಸ ಪಕ್ಷ ಘೋಷಣೆ ಮಾಡಿದರು. ಪ್ರತಿ ಹಳ್ಳಿ ಮನೆ ಮನೆಗೂ ಬರುತ್ತೇನೆ ಎಂದು ಇದೇ ವೇಳೆ ಹೇಳಿದರು.
ಇದನ್ನೂ ಓದಿ:ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ!