ಬೆಂಗಳೂರು:ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರು ಇಲ್ಲಿನ ತಮ್ಮ ನಿವಾಸ ಪಾರಿಜಾತದಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ಮಹತ್ವದ ಮಾಧ್ಯಮಗೋಷ್ಟಿ ಕರೆದಿದ್ದು, ತಮ್ಮ ಹೊಸ ರಾಜಕೀಯ ಹೆಜ್ಜೆ ಬಗ್ಗೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಈ ಮಾಧ್ಯಮಗೋಷ್ಟಿ ಭಾರಿ ಕುತೂಹಲ ಮೂಡಿಸಿದೆ. ಜನಾರ್ದನ್ ರೆಡ್ಡಿ ನಾಳೆ ಬಿಜೆಪಿಗೆ ಶಾಕ್ ಕೊಡ್ತಾರಾ ಎಂಬ ಬಲವಾದ ಅನುಮಾನ ಮೂಡಿದೆ. ಈಗಾಗಲೇ ಹೊಸ ಪಕ್ಷ ಕಟ್ಟುವ ವದಂತಿ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಟಿ ಕುತೂಹಲ ಕೆರಳಿಸಿದೆ.
ಇದೇ ಡಿ.30ಕ್ಕೆ ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದು, ಅಮಿತ್ ಶಾ ಎಂಟ್ರಿ ಹೊತ್ತಲ್ಲಿ ಮಹತ್ವದ ರಾಜಕೀಯ ನಿರ್ಧಾರ ಪ್ರಕಟ ಮಾಡ್ತಿದಾರಾ ಜನಾರ್ದನ್ ರೆಡ್ಡಿ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಕಳೆದ ಒಂದು ವಾರದಿಂದ ಮಠ ಮಾನ್ಯಗಳು, ದರ್ಗಾಗಳಿಗೆ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಡಿ.19ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಬಳಿಕ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದರು. ಡಿ.20ಕ್ಕೆ ಗದಗದ ತೋಂಟದಾರ್ಯಾ ಶ್ರೀಗಳ ಗದ್ದುಗೆ ಹಾಗೂ ಪುಟ್ಟರಾಜ ಗವಾಯಿಗಳ ಗದ್ದುಗೆಯ ದರ್ಶನ ಪಡೆದಿದ್ದರು. ಡಿ.21ರಂದು ಮಸ್ಕಿಯಲ್ಲಿ ಪ್ರಮುಖ ಮುಖಂಡರ ಭೇಟಿಯಾಗಿದ್ದರು.
ಡಿ.22ರಂದು ಗಂಗಾವತಿಗೆ ತೆರಳಿ ಗ್ರಾಮ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವ ಹಾಗೂ ಪ್ರಮುಖ ಮುಖಂಡರನ್ನು ಭೇಟಿಯಾಗಿದ್ದರು. ಗಂಗಾವತಿಯಲ್ಲಿ ಮನೆ ಮಾಡಿರುವ ರೆಡ್ಡಿ, ಕರ್ನೂಲಸಾಬರ ದರ್ಗಾ ಹಾಗೂ ಖಾಲಿಲುಲ್ಲ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿದ್ದರು. ಹೊಸ ಪಕ್ಷ ಕಟ್ಟುತ್ತಾರೆ ಎಂಬ ಸುದ್ದಿಯ ಮಧ್ಯೆ ಜನಾರ್ದನ್ ರೆಡ್ಡಿ ಅವರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ಭಾನುವಾರ ಎಲ್ಲ ಕುತೂಹಲಕ್ಕೂ ಉತ್ತರ ಸಿಗಲಿದೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ಕರೆದಿದ್ದೇನೆ. ಅಂದೇ ಎಲ್ಲವನ್ನು ಹೇಳುತ್ತೇನೆ ಎಂದು ರೆಡ್ಡಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.