ಬೆಂಗಳೂರು:ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ನಿರೀಕ್ಷೆಯಂತೆ ಭಾನುವಾರ ಹೊಸ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ದ ಮೂಲಕ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಬಿಜೆಪಿಗೆ ಗುಡ್ ಬೈ:ಬಿಜೆಪಿ ಜೊತೆಗಿನ ಸಂಬಂಧಕ್ಕೆ ವಿದಾಯ ಹೇಳಿದ ಜನಾರ್ದನ ರೆಡ್ಡಿ, ಇದೀಗ ಹೊಸ ಪಕ್ಷ ಘೋಷಿಸಿದ್ದಾರೆ. ಗೋಲಿಯಾಟದಲ್ಲೇ ಸೋಲನ್ನು ಒಪ್ಪದ ನಾನು, ರಾಜಕೀಯದಲ್ಲಿ ಸೋಲೊಪ್ಪಲ್ಲ. ನನಗೆ ಜನರ ಆಶೀರ್ವಾದ ಸಿಗಲಿದೆ. ಕರ್ನಾಟಕ ಕಲ್ಯಾಣವಾಗಲಿದೆ. ಪ್ರಗತಿ ಕಾಣಲಿದೆ ಎಂದು ಈ ಸಂದರ್ಭದಲ್ಲಿ ರೆಡ್ಡಿ ಹೇಳಿದರು.
ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಜನಾರ್ದನ ರೆಡ್ಡಿ, 12 ವರ್ಷದ ನಂತರ ಬಳ್ಳಾರಿಗೆ ಬರಲು ಕೋರ್ಟ್ ಆದೇಶ ಕೊಟ್ಟರೂ ಮತ್ತೆ ನಮ್ಮನ್ನು ಬಳ್ಳಾರಿಯಿಂದ ಸಿಬಿಐ ಬಳಸಿ ಹೊರಹಾಕಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಹಿತೈಷಿಗಳು ನಾವೆಲ್ಲಾ ನಿಮ್ಮ ಜೊತೆ ಇರಲಿದ್ದೇವೆ. ನಿಮ್ಮ ಶಕ್ತಿಯಾಗಿ ಕೆಲಸ ಮಾಡುತ್ತೇವೆ. ನಿಮ್ಮ ಬೆನ್ನೆಲುಬಾಗಿ ಇರಲಿದ್ದೇವೆ. ಧರ್ಮ, ಸತ್ಯ , ಮಾನವೀಯ ಮೌಲ್ಯ ಸತ್ತುಹೋಗಿದೆ. ಈ ಕ್ಷಣದಲ್ಲಿಯೂ ಬಿಜೆಪಿಯಿಂದ ಹೊರಗೆ ಬಂದಿಲ್ಲ ಎಂದರೆ ಹೇಗೆ? 12 ವರ್ಷ ವನವಾಸ ಅನುಭವಿಸಿದ್ದೀಯ. ನಿಮ್ಮ ಜೊತೆ ನಾವಿದ್ದು ಕೆಲಸ ಮಾಡುತ್ತೇವೆ ಎಂದು ಬಳ್ಳಾರಿಯ ಜನ ಹೇಳಿದಾಗ ನಾನು ಹೊಸ ಪಕ್ಷ ಆರಂಭಿಸುವ ನಿರ್ಧಾರ ಮಾಡಿದೆ ಎಂದರು.
ಬಿಜೆಪಿ ಜೊತೆಗಿನ ಸಂಬಂಧ ಬಿಡುತ್ತಿದ್ದೇನೆ:ಬಸವಣ್ಣ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ರೀತಿ, ಇವನಾರವ ಇವನಾರವ ಇವ ನಮ್ಮವ ಇವ ನಮ್ಮವ ಕೂಡಲ ಸಂಗಮ ದೇವ ನಾನಿನ್ನ ಮನೆಯ ಮಗನೆನಿಸಯ್ಯ ಎನ್ನುವಂತೆ ಜಾತಿ ಮತ ಬೇಧ ಇಲ್ಲದಂತೆ ಲಿಂಗ ಬೇಧ, ಮೇಲು ಕೀಳು ಇಲ್ಲದಂತೆ ರಾಜ್ಯದ ಅಭಿವೃದ್ಧಿಗೆ ನಾನು ಕಂಡ ಕನಸು, ನಾನು ಏನು ಎಂದು ತೋರಿಸಲು, ಜನರು ಬೆಂಬಲ ಕೊಡುತ್ತಿರುವ ಈ ಸಂದರ್ಭದಲ್ಲಿ ವಾಜಪೇಯಿ ಸಿದ್ದಾಂತ ನಂಬಿದ್ದ ನಾನು ಇವತ್ತಿಗೆ ಬಿಜೆಪಿ ಜೊತೆಗಿನ ಸಂಬಂಧ ಬಿಡುತ್ತಿದ್ದೇನೆ ಎಂದು ತಿಳಿಸಿದರು.