ಬೆಂಗಳೂರು :ಮುಂಬರುವ ಚುನಾವಣೆ ಗೆಲುವನ್ನು ಧ್ಯೇಯವಾಗಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ ಎಂಬ ಮಾತು ಸತ್ಯಕ್ಕೆ ದೂರ ಅನ್ನುವ ಅರಿವು ಮೂಡಲಾರಂಭಿಸಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಪಠಿಸುತ್ತಿದೆ. ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದು ಕಳೆದ ಮೂರ್ನಾಲ್ಕು ತಿಂಗಳಿಂದ ಹೇಳಲಾಗುತ್ತಿತ್ತು. ಅದಕ್ಕೆ ಉದಾಹರಣೆಯ ರೀತಿ ಪಕ್ಷದ ನಾಯಕರ ಒಗ್ಗಟ್ಟನ್ನು ಮೆಚ್ಚಿದ್ದ ಜನ ಮಸ್ಕಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ರುಚಿ ನೀಡಿದ್ದರು.
ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ಸನಿಹದವರೆಗೆ ಕರೆದೊಯ್ದು ಬಿಟ್ಟಿದ್ದರು. ಎಲ್ಲವೂ ಸರಿಯಾಗಿದೆ, ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುವ ಕಾಂಗ್ರೆಸ್ ನಾಯಕರು ಹೆಚ್ಚು ಸ್ಥಾನ ಗಳಿಸಿ ನಂತರ ಹೈಕಮಾಂಡ್ ಮುಂದೆ ಸಿಎಂ ಯಾರು ಎನ್ನುವ ಪ್ರಸ್ತಾಪ ಇಡುತ್ತಾರೆ. ಇದೇ ರೀತಿ ಹೈಕಮಾಂಡ್ ಸಹ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿಳಿಸಿದೆ ಎನ್ನಲಾಗುತ್ತಿತ್ತು. ಆದರೆ, ಇದೀಗ ವಾರದ ಈಚಿನ ಬದಲಾವಣೆ ಕಾಂಗ್ರೆಸ್ ನಾಯಕರ ಮುಸುಕಿನ ಗುದ್ದಾಟ ನಿಂತಿಲ್ಲ. ಕೆಲ ದಿನ ವಿಶ್ರಾಂತಿ ಪಡೆದಿತ್ತು ಎನ್ನುವ ಸೂಚನೆ ನೀಡುತ್ತಿದೆ.
ಜಮೀರ್ ಮಾತು :ಮೂರ್ನಾಲ್ಕು ದಿನದ ಹಿಂದೆ ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಅವರು ಆಡಿದ ಮಾತು ಕೈ ನಾಯಕರ ಸಿಎಂ ಆಕಾಂಕ್ಷಿಗಳ ಮೇಲಾಟ ಮತ್ತೆ ಆರಂಭವಾಗುವಂತೆ ಮಾಡಿದೆ. ಮುಂದಿನ ಸಿಎಂ ಸಿದ್ದರಾಮಯ್ಯ ಅವರೇ ಎಂದು ಹೇಳುವ ಮೂಲಕ ಮುಸುಕಿನ ಗುದ್ದಾಟವನ್ನು ಬಯಲಿಗೆ ತಂದಿದ್ದಾರೆ. ಅಲ್ಲಿಯವರೆಗೂ ತಾಳ್ಮೆಯಿಂದ ಇದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಇದು ಕೆಣಕಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಜಮೀರ್ ಮಾಡಿದ ಆರೋಪಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ, ಇದೇ ರೀತಿ ಮಾತನಾಡುತ್ತಾ ಸಾಗಿದರೆ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.