ಕರ್ನಾಟಕ

karnataka

ETV Bharat / state

ವೃಥಾ ಆರೋಪ ಎಚ್​ಡಿಕೆಗೆ ಶೋಭೆ ತರಲ್ಲ, ಯತೀಂದ್ರ ವರ್ಗಾವಣೆ ಬಗ್ಗೆ ಮಾತನಾಡಿಲ್ಲ: ಜಮೀರ್ ಅಹಮದ್

ಮಾಜಿ ಶಾಸಕ ಯತೀಂದ್ರ ಅವರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ಮಾತನಾಡಬಾರದೇ? ಎಂದು ಸಚಿವ ಜಮೀರ್ ಅಹಮದ್ ಖಾನ್ ಅವರು ಪ್ರಶ್ನಿಸಿದ್ದಾರೆ.

ಸಚಿವ ಜಮೀರ್ ಅಹಮದ್ ಖಾನ್
ಸಚಿವ ಜಮೀರ್ ಅಹಮದ್ ಖಾನ್

By ETV Bharat Karnataka Team

Published : Nov 16, 2023, 9:39 PM IST

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ವರುಣಾ ಕ್ಷೇತ್ರದ ಶಾಲೆಗಳ ಅಭಿವೃದ್ಧಿ ವಿಚಾರದಲ್ಲಿ ನಡೆದ ದೂರವಾಣಿ ಮಾತುಕತೆಯನ್ನು ವರ್ಗಾವಣೆಯದ್ದು ಎಂದು ಕಲ್ಪಿಸಿಕೊಂಡು ಹೆಚ್ ಡಿ ಕುಮಾರಸ್ವಾಮಿ ಅವರು ಆರೋಪ ಮಾಡಿರುವುದು ಮಾಜಿ ಮುಖ್ಯಮಂತ್ರಿಯಾದ ಅವರಿಗೆ ಶೋಭೆ ತರದು ಎಂದು ಸಚಿವ ಜಮೀರ್ ಅಹಮದ್ ಖಾನ್ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದೊಂದು ಹಳೆಯ ಕ್ಲಿಪಿಂಗ್. ವರ್ಗಾವಣೆ ಸಂಬಂಧ ಯಾವುದೇ ಮಾತು ಆಡಿಲ್ಲ. ಶಾಲೆಗಳ ಅಭಿವೃದ್ಧಿಗೆ ಸೀಮಿತವಾಗಿ ಮಾತನಾಡಿದ್ದಾರೆ. ಆದರೂ ಅದನ್ನೇ ರಾಜಕೀಯವಾಗಿ ಬಳಸಿಕೊಂಡು ಇಲ್ಲ ಸಲ್ಲದ ಆರೋಪ ಮಾಡಿರುವುದು ಸರಿಯಲ್ಲ. ತಮ್ಮ ಮೇಲಿನ ವಿವಾದದ ಗಮನ ಬೇರೆಡೆ ಸೆಳೆಯಲು ಯತೀಂದ್ರ ವಿಚಾರ ಎಳೆದು ತಂದಿದ್ದಾರೆ ಎಂದು ದೂರಿದ್ದಾರೆ.

ರಾಜಕಾರಣದಲ್ಲಿ ಸತ್ಯಾಂಶ ಇದ್ದರೆ, ದಾಖಲೆ ಸಮೇತ ಆರೋಪ ಮಾಡಲಿ. ಅದು ಬಿಟ್ಟು ಹತಾಶರಾಗಿ ಕಥೆ ಕಟ್ಟಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಹೇಳಿದ್ದಾರೆ. ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರು ಮತ್ತು ಕೆಡಿಪಿ ಸದಸ್ಯರಾಗಿರುವ ಮಾಜಿ ಶಾಸಕ ಯತೀಂದ್ರ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆಯೂ ಮಾತನಾಡಬಾರದೇ ಎಂದು ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು- ಛಲವಾದಿ ನಾರಾಯಣ ಸ್ವಾಮಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ತಂದೆಯ ಅಧಿಕಾರವನ್ನು ಪುತ್ರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’’ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆಗಿದೆ. ಅದನ್ನ ಇಡೀ ರಾಜ್ಯದ ಜನ ನೋಡ್ತಿದ್ದಾರೆ. ಈಗಿನ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ವಿಪಕ್ಷ ನಾಯಕರಾಗಿದ್ದಾಗ ಎಲ್ಲಾ ಸಿಎಂ ಕುಟುಂಬದ ಮೇಲೆ ಆರೋಪ ಮಾಡಿದ್ದರು. ಯಡಿಯೂರಪ್ಪ, ಬೊಮ್ಮಾಯಿ, ಹಿಂದೆ ಕುಮಾರಸ್ವಾಮಿ ಅವರ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ. ಅವರ ಮಕ್ಕಳೆಲ್ಲಾ ಸೇರಿ ಅಧಿಕಾರ ದುರುಪಯೋಗ ಮಾಡ್ತಿದ್ದಾರೆ ಅಂತ‌ ಹೇಳಿದ್ದರು. ಈಗ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ಬಿಡುಗಡೆ ಆಗಿದೆ. ಇದಕ್ಕೆ ಏನನ್ನುತ್ತಾರೆ ಎಂದು ಪ್ರಶ್ನಿಸಿದರು. ವರ್ಗಾವಣೆ ವಿಷಯ ಅಲ್ಲ. ಶಾಲೆಗಳ ಜೀರ್ಣೋದ್ಧಾರ ವಿಚಾರ ಎಂದು ಸಿಎಂ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ, ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಸಿದ್ದರಾಮಯ್ಯ ಹಿಂದೆ ಈ ಪರಿ ಸುಳ್ಳುಗಾರ ಆಗಿರಲಿಲ್ಲ. ಕಾಂಗ್ರೆಸ್‌ಗೆ ಸೇರಿದ ಮೇಲೆ ಅವರಲ್ಲಿ ಬಹಳ ಬದಲಾವಣೆ ಆಗಿದೆ. ಟ್ರಾನ್ಸ್‌ಫರ್ ದಂಧೆ ಮಾಡಿಲ್ಲ. ಅದನ್ನ ಪ್ರೂವ್ ಮಾಡಿದರೆ ರಾಜಕೀಯದಿಂದ ನಿವೃತ್ತಿ ಆಗ್ತೀನಿ ಅಂತ ಹೇಳಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಟ್ರಾನ್ಸ್‌ಫರ್ ಅಲ್ಲ. ಶಾಲೆ ವಿಚಾರವಾಗಿ ಚರ್ಚೆ ಮಾಡಿದ್ದರು ಅಂತ ಹೇಳಿದ್ದಾರೆ. ಹಾಗಾದರೆ ನಾನು ಕೇಳ್ತೀನಿ. ವಿವೇಕಾನಂದ ಅಂದ್ರೆ ಯಾರು.? ‘‘ಎಂದು ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದರು.

‘‘ಮಹದೇವಗೆ ಫೋನ್ ಮಾಡಿ ನಾನು ಹೇಳಿದ್ದು ಯಾಕೆ ಮಾಡಲಿಲ್ಲ ಅಂತ ಕೇಳಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ.? ಶಾಲೆಗಳನ್ನ ಜೀರ್ಣೋದ್ಧಾರ ಮಾಡೋದಿದ್ರೆ ಹೀಗೆ ಯಾಕೆ ಹೇಳಬೇಕಿತ್ತು. ಯತೀಂದ್ರ ಅವರು ನಿಮ್ಮನ್ನ, ಸೆಕ್ರೆಟರಿ ಮಹದೇವ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ‌ ಆಡಳಿತದ ಅವಧಿಯಲ್ಲಿ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರು ಜನರಲ್ ಅಟಾರ್ನಿ ಆಗಿದ್ದು, ನಿಮ್ಮ ಎಲ್ಲಾ ನಿರ್ಧಾರ ಅವರು ತೆಗೆದುಕೊಳ್ತಿದ್ದಾರೆ. ನೀವು ಪ್ರಮಾಣ ಮಾಡಿರುವುದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ತಿದ್ದಾರೆ. ಹಾಗಾಗಿ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು‘‘ ಎಂದು ಆಗ್ರಹಿಸಿದರು.

ಸಿಎಂ ರಾಜೀನಾಮೆಗೆ ರವಿಕುಮಾರ್​​​​​ ಆಗ್ರಹ:ಯತೀಂದ್ರರೆ ನೇರವಾಗಿ ಸಿಎಂ ಅಧಿಕಾರವನ್ನು ಚಲಾಯಿಸುತ್ತಿರುವುದು ವೈರಲ್ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಕೂಡಲೇ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಪುತ್ರ ಯತೀಂದ್ರ ವಿಡಿಯೋ ವೈರಲ್ ಆಗಿದೆ. ಸಭೆಯಲ್ಲಿ ಹೊರಗೆ ಬಂದು ಯತೀಂದ್ರ ಅವರು ಅವರ ತಂದೆಗೆ ಫೋನ್ ಮಾಡ್ತಾರೆ. ಅಪ್ಪ ನಾನು ಹೇಳಿದ ನಾಲ್ಕೈದು ಹೆಸರು ಮಾತ್ರ ಮಾಡಿ. ಉಳಿದದ್ದು ಮಾಡಬೇಡಿ ಅಂತ ಹೇಳಿದ್ದಾರೆ. ಮಹದೇವ್ ನಾನು ಹೇಳಿದ ನಾಲ್ಕು ಮಾತ್ರ ಮಾಡಿ, ಅದನ್ನ ಬಿಟ್ಟು ಮಾಡಬೇಡಿ ಅಂತ ಅಂದಿದಾರೆ. ಅಂದ್ರೆ ಯಾವುದು ಡೀಲ್ ಆಗಿದೆ. ಅದನ್ನ ಮಾತ್ರ ಮಾಡಿ. ಡೀಲ್ ಆಗದಿರೋದು ಬೇಡ ಅಂತ ಹೇಳ್ತಾರೆ.

ತಂದೆ ಸಿದ್ದರಾಮಯ್ಯಗೆ ಹೇಳಿದ್ದಾರೆ. ಇವರು ಶಾಡೋ ಸಿಎಂ. ಸಿಎಂ ಬಳಿ ಕೆಲಸ ಆಗಬೇಕು ಅಂದರೆ ಯತೀಂದ್ರ ಸಿದ್ದರಾಮಯ್ಯ ಚೀಟಿ ಕಳಿಸಬೇಕು. ಸಿಎಂ ಬಳಿ ಮನವಿ ಮಾಡ್ತೀನಿ. ವಿಜಯೇಂದ್ರ ಅವರಿಗೆ ಕುಟುಂಬ ರಾಜಕೀಯ ಅಂತೀರಿ. ನೀವು ಕೋಟ್ಯಂತರ ಅವ್ಯವಹಾರ ಮಾಡ್ತಿದ್ದೀರಿ. ಸಿಎಂ ಬಳಿ ಒಂದಷ್ಟು ಭ್ರಷ್ಟಾಚಾರ, ಡಿಸಿಎಂ ವಿರುದ್ಧ ಕಂಟ್ರಾಕ್ಟರ್ಸ್ ಒಂದಷ್ಟು ಭ್ರಷ್ಟಾಚಾರ ಆರೋಪ ಮಾಡ್ತಿದ್ದಾರೆ. ಈ ಸರ್ಕಾರ ಬಂದ ಮೇಲೆ ಯಾರನ್ನಾದ್ರೂ ಕೇಳಿ ವಿಪರೀತ ಭ್ರಷ್ಟಾಚಾರ ನಡೆಯುತ್ತಿದೆ. ನಮ್ಮ‌ ಬಿಜೆಪಿ ಮೇಲೆ 40 ಪರ್ಸೆಂಟ್​ ಸರ್ಕಾರ ಅಂತ ಆರೋಪ ಮಾಡಿದ್ರು. ಯಾವುದನ್ನೂ ಸಾಬೀತು ಮಾಡಲು ಆಗಲಿಲ್ಲ‌. ಇವರದ್ದು 60ರಿಂದ 80 ಪರ್ಸೆಂಟ್​ ಎಂದು ಸ್ಪಷ್ಟಪಡಿಸಬೇಕು. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ಆಗ್ರಹಿಸಿದರು.

ಇದನ್ನೂ ಓದಿ:ಕುಮಾರಸ್ವಾಮಿ ಬುಟ್ಟಿಯೊಳಗೆ ಹಾವಿಲ್ಲ: ಸಚಿವ ಜಮೀರ್ ಅಹಮ್ಮದ್​

ABOUT THE AUTHOR

...view details