ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಉಮ್ರಾ ಯಾತ್ರೆಗೆ ತೆರಳಲಿದ್ದ ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ಹಣ ವಿತರಿಸಿದ್ದಾರೆ. ಗೌರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ಸೌದಿ ಅರೇಬಿಯಾದ 500 ರೂ. ಮುಖಬೆಲೆಯ ನೋಟುಗಳನ್ನ ಹಂಚಿಕೆ ಮಾಡಿದ್ದಾರೆ. ಹಣದ ಜೊತೆ ನ್ಯಾಷನಲ್ ಟ್ರಾವೆಲ್ಸ್ ಕಿಟ್ ಅನ್ನೂ ನೀಡಿದ್ದಾರೆ. ಈ ಬಗ್ಗೆ ಶಾಸಕರೇ ಖುದ್ದು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಪಾದರಾಯನಪುರ ವಾರ್ಡ್ 135, ಜೆಜೆಆರ್ ನಗರ ವಾರ್ಡ್ 136, ರಾಯಪುರಂ ವಾರ್ಡ್ 127 ಆಶಾ ಕಾರ್ಯಕರ್ತೆಯರಿಗೆ ಈ ಹಣ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಶಾಸಕರೇ ಖುದ್ದು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ. ವಿದೇಶಿ ನೋಟು ಹಂಚಿಕೆಗೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಇವತ್ತು ವಿದೇಶಿ ನೋಟು ಹಂಚ್ತಾರೆ. ನಾಳೆ ಮತ್ತೊಂದು ಮಾಡ್ತಾರೆ. ಚುನಾವಣೆಯ ಸಮಯದಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನವಿದು. ಕೂಡಲೇ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಕ್ರಮಕ್ಕೆ ಕಡಿವಾಣ ಹಾಕುವಂತೆ ಕೆಲವರಿಂದ ಒತ್ತಾಯ: ಒಟ್ಟಾರೆ ತಮ್ಮ ಮತಕ್ಷೇತ್ರದಲ್ಲಿ ವಿದೇಶಿ ನೋಟು ವಿತರಿಸಿ ಜಮೀರ್ ಅಹ್ಮದ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರು ಇದನ್ನು ಯಾವ ರೀತಿ ಬಳಸಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಚಾಮರಾಜಪೇಟೆಯಿಂದ ಮರು ಆಯ್ಕೆ ಬಯಸಿ ಕಾಂಗ್ರೆಸ್ನಿಂದ ಜಮೀರ್ ಸ್ಪರ್ಧಿಸಲಿದ್ದಾರೆ. ಇವರು ಈಗಲೇ ಆಮಿಷ ಒಡ್ಡಲು ಆರಂಭಿಸಿದ್ದು, ಗೆಲುವಿಗಾಗಿ ಸಾಕಷ್ಟು ತಂತ್ರಗಾರಿಕೆ ಮಾಡಲಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನಡೆಯುತ್ತಿರುವ ಇಂತಹ ಅಕ್ರಮಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.