ಬೆಂಗಳೂರು: ಮೈಸೂರು ಸಂಸ್ಥಾನದ ಮಹಾರಾಜರ ಕುಟುಂಬದಿಂದ ಬಳುವಳಿಯಾಗಿ ಬಂದಿರುವ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಜಾಗವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ದಿ ಪಡಿಸಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದೆ.
ದೂರು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ರಾಘವೇಂದ್ರ, ಜಕ್ಕೂರಿನಲ್ಲಿ ವೈಮಾನಿಕ ಶಾಲೆ ನಿರ್ಮಿಸಲು ಮೈಸೂರು ಸಂಸ್ಥಾನದಿಂದ 211 ಎಕರೆ ಜಮೀನು ನೀಡಲಾಗಿತ್ತು. ಇದೀಗ ಅಭಿವೃದ್ದಿ ಹೆಸರಿನಲ್ಲಿ ಶಾಲೆ ಮುಚ್ಚುವ ಹುನ್ನಾರ ನಡೆಸುತ್ತಿದ್ದಾರೆ. ಅಲ್ಲದೇ, ಖಾಸಗಿಯವರ ವಶಕ್ಕೆ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರಸ್ತೆ ಸಂಪರ್ಕ ವಿಸ್ತರಿಸಲು 2014ರಲ್ಲಿ ಈ ಮಾರ್ಗದಲ್ಲಿ 12 ಮೀಟರ್ ಎತ್ತರದ ಎಲಿವೇಟೆಡ್ ಕಾಮಗಾರಿ ನಡೆಸುವುದಕ್ಕೆ ಅನುಮತಿ ನೀಡಲಾಗಿತ್ತು. ಇದರಿಂದ 950 ಮೀಟರ್ನಷ್ಟಿದ್ದ ರನ್ ವೇ ಕೇವಲ 450 ಮೀಟರ್ಗಳಿಗೆ ಇಳಿದಿದೆ. ಇದೀಗ ಮೆಟ್ರೋ ರೈಲು ಕಾಮಗಾರಿ ನಡೆಸುವುದಕ್ಕೆ ಅನುಮತಿ ನೀಡಿದ್ದು, ವಿಮಾನಗಳ ಲ್ಯಾಂಡಿಂಗ್ ಅಪಾಯಕಾರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದೂ ಅವರು ದೂರಿದರು.
ರನ್ ವೇ ಕಡಿಮೆಯಾದ ಹಿನ್ನೆಲೆಯಲ್ಲಿ ಖಾಸಗಿ ಜಮೀನು ಖರೀದಿಸಿ 170 ಮೀಟರ್ ವಿಸ್ತರಿಸಬೇಕು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಗಳ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಇದು ಈವರೆಗೂ ಯಾವುದೇ ಬೆಳವಣಿಗೆ ಕಂಡಿಲ್ಲ. ಬದಲಾಗಿ ಕ್ರೀಡಾ ಇಲಾಖೆಯೊಂದಿಗೆ ಖಾಸಗಿಯವರು ಅಭಿವೃದ್ಧಿ ಪಡಿಸಲು ಮುಂದಾಗುತ್ತಿದ್ದಾರೆ. ಸರ್ಕಾರಿ ಶಾಲೆ ಉಳಿಯಬೇಕಾಗಿದ್ದವರೇ ಸರ್ಕಾರಿ ಜಾಗ ಕಬಳಿಸಲು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಲೋಕಾರ್ಪಣೆ.. ರನ್ ವೇ ವಿಸ್ತರಣೆ ಭರವಸೆ ನೀಡಿದ ಸಿಎಂ