ಬೆಂಗಳೂರು: "ನಮ್ಮ ದೇಶ ನಾಲ್ಕು ಧರ್ಮಗಳ ಹುಟ್ಟು ಕಂಡಿದೆ. ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ ಧರ್ಮಗಳು ಜನಿಸಿದ್ದು ಭಾರತದಲ್ಲಿಯೇ. ವಿಶ್ವಕ್ಕೆ ಈ ನಾಲ್ಕು ಧರ್ಮಗಳು ವಿಶೇಷ ಸಂದೇಶ ನೀಡುತ್ತಿವೆ. ಜೈನ ಧರ್ಮ ನೀಡಿರುವ ಶಾಂತಿಯ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಶನಿವಾರ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಾಡಿನ ಬಹುಶ್ರುತ ವಿದ್ವಾಂಸ ಪ್ರೊ.ಕೆ.ಇ.ರಾಧಾಕೃಷ್ಣ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2023ನೇ ಸಾಲಿನ ಚಾವುಂಡರಾಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಸಚಿವರು, "ಧರ್ಮದ ಕುರಿತಾದ ಅಧ್ಯಯನ ನಮ್ಮಲ್ಲಿ ಕೇವಲ ಅಕಾಡೆಮಿಕ್ ನೆಲೆಯಲ್ಲಿ ನಡೆಯುತ್ತಿದೆಯೇ ಹೊರತು ಅದರ ಅಂತಃಸತ್ವ ಹಿಡಿಯುವ ಕೆಲಸವಾಗುತ್ತಿಲ್ಲ. ಪ್ರೊ.ಕೆ.ಇ.ರಾಧಾಕೃಷ್ಣ ಇಂತಹ ಮಹತ್ವದ ಕೆಲಸವನ್ನು ಮಾಡಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ಜೈನ ಧರ್ಮ ನಮ್ಮ ದೇಶದಲ್ಲಿ ಹುಟ್ಟಿಕೊಂಡು ಪ್ರಪಂಚಕ್ಕೆ ಶಾಂತಿಯ ಸಂದೇಶವನ್ನು ನೀಡುತ್ತಾ ಬಂದಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ಯೋಗ್ಯರನ್ನು ಹುಡುಕಿ ಗೌರವಿಸುವ ಕಾರ್ಯ ಮಾಡುತ್ತಿರುವ ಪರಿಷತ್ತಿನ ಬಗ್ಗೆ ಬಹಳ ಹೆಮ್ಮೆ ಇದೆ" ಎಂದರು.
"ಕನ್ನಡ ಸಾಹಿತ್ಯ ಪರಿಷತ್ತನ್ನು ನಾನು ಹಿಂದಿನಿಂದಲೂ ಗಮನಿಸುತ್ತಾ ಬಂದಿದ್ದೇನೆ. ಹಿಂದೆ ಇದ್ದಂತೆ ಈಗ ಇಲ್ಲ, ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಪರಿಷತ್ತಿನಲ್ಲಿ ಆಮೂಲಾಗ್ರ ಬದಲಾವಣೆ ಬಂದಿದೆ. ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ಸಂಸ್ಕೃತಿಗಾಗಿ ಕೆಲಸ ಮಾಡುತ್ತಾ ಬಂದಿರುವ ಪರಿಷತ್ತು, ಈಗ ನವ ನವೀನವಾಗಿ ಕಂಗೊಳಿಸುತ್ತಿದೆ. ನಮ್ಮ ಕೆಲಸ ಕಾರ್ಯದಲ್ಲಿಯೂ ಅರ್ಥಪೂರ್ಣತೆ ತೋರಿಸುತ್ತಿರುವುದು ಗಮನಾರ್ಹ. ಪರಿಷತ್ತಿನ ಜವಾಬ್ದಾರಿ ವಹಿಸಿದ ನಾಡೋಜ ಡಾ. ಮಹೇಶ್ ಜೋಶಿ ಅವರ ಸೇವಾ ತತ್ಪರತೆ ಎದ್ದು ಕಾಣುತ್ತದೆ. ಪರಿಷತ್ತಿನಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆ. ಕನ್ನಡವನ್ನು ಉಳಿಸಿ ಬೆಳಸುವುದಕ್ಕೆ ತನ್ನನ್ನು ತೊಡಗಿಸಿಕೊಂಡ ಪರಿಷತ್ತು ಹೊಸ ಅವಿಷ್ಕಾರ ಹಾಗೂ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವುದು ಸ್ವಾಗತಾರ್ಹ" ಎಂದು ಡಾ.ಜಿ. ಪರಮೇಶ್ವರ ಸಂತಸಪಟ್ಟರು.
ಕನ್ನಡ ಸಾಹಿತ್ಯ ಆರಂಭವಾಗಿದ್ದೇ ಜೈನ ಬರಹಗಾರರಿಂದ ಎಂದು ಹೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, "ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನ ಈ ನಾಡು" ಎಂಬ ಅಂಬಿಕಾತನಯದತ್ತರ ಕವಿವಾಣಿಯನ್ನು ಪ್ರಾಸಂಗಿಕವಾಗಿ ನೆನಪು ಮಾಡಿಕೊಂಡರು.
"ಕನ್ನಡ ಸರಸ್ವತ ಲೋಕಕ್ಕೆ ಜೈನರ ಕೊಡುಗೆ ಅಪಾರ. 10ನೇ ಶತಮಾನದಲ್ಲಿಯೇ ಕನ್ನಡ ಸಾಹಿತ್ಯ ಲೋಕವನ್ನು ಉತ್ತುಂಗಕ್ಕೆ ಏರಿಸಿದವರು ಇವರು. ಕನ್ನಡ ಸಾಹಿತ್ಯ ಪರಿಷತ್ತು ಜೈನರ ಕೊಡುಗೆಗಳನ್ನು ನಿತ್ಯವೂ ಸ್ಮರಿಸಿಕೊಳ್ಳುತ್ತದೆ. ಪರಿಷತ್ತಿನ ಮುಂಭಾಗದಲ್ಲಿ ಇರುವ ಪಂಪ ಮಹಾಕವಿ ರಸ್ತೆಯಲ್ಲಿ ಪಂಪನ ಪುತ್ಥಳಿ ಇರಲಿಲ್ಲ. ಅದಕ್ಕೆ ಪರಿಷತ್ತು ಪಂಪನ ಪುತ್ಥಳಿಯನ್ನು ಸ್ಥಾಪಿಸಿ ಜೊತೆಗೆ ʻಮನುಷ್ಯ ಜಾತಿ ತಾನೊಂದೆ ವಲಂʼ ಎಂಬ ವಿಶ್ವ ಮಾನವ ಸಂದೇಶದ ಧ್ಯೇಯವಾಕ್ಯವನ್ನು ಗೌರವಪೂರ್ವಕವಾಗಿ ಬಳಸಿಕೊಳ್ಳಲಿದೆ, ಈ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ" ಎಂದು ತಿಳಿಸಿದರು.
"ಚಾವುಂಡರಾಯ 10ನೇ ಶತಮಾನಕ್ಕೆ ಸೇರಿದ ಜೈನ ಕವಿ ಮತ್ತು ಮಹಾಯೋಧ. ಕನ್ನಡ, ಜೈನ ಸಾಹಿತ್ಯ ರಚನೆಕಾರನಾಗಿ ಹಾಗೂ ಅನೇಕ ಕವಿಗಳಿಗೆ ಪೋಷಕನಾಗಿ, ದಾನ-ಧರ್ಮಗಳಿಗೆ ಹೆಸರುವಾಸಿಯಾಗಿ ಮೆರೆದವರು. ‘ಚಾವುಂಡರಾಯ ಪುರಾಣ’ ಎಂದು ವಾಡಿಕೆಯಾಗಿ ಹೇಳುವ ‘ತ್ರಿಷಷ್ಟಿ ಲಕ್ಷಣ ಮಹಾ ಪುರಾಣ’ ಎಂಬ ಮಹಾಪುರಾಣ ರಚಿಸಿದವನು. ಕನ್ನಡ ನಾಡಿನ ಪ್ರಸಿದ್ಧ ಜೈನಕ್ಷೇತ್ರ ಶ್ರವಣಬೆಳಗೊಳದಲ್ಲಿ ಭಕ್ತಿ, ಜ್ಞಾನ, ವೈರಾಗ್ಯಮೂರ್ತಿ ‘ಗೊಮ್ಮಟೇಶ್ವರ’ ಎಂದು ಕರೆಯುವ ಬಾಹುಬಲಿ ಸ್ವಾಮಿಯ ಮಹೋನ್ನತ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿದ ಧೀಮಂತ ವ್ಯಕ್ತಿ ಚಾವುಂಡರಾಯ" ಎಂದು ಬಣ್ಣಿಸಿದರು.