ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ 2021-22 ನೇ ಸಾಲಿನ ಬಜೆಟ್ ಮಂಡಿಸುವ ವೇಳೆ ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಆಡಳಿತ ಪಕ್ಷದ ಸದಸ್ಯರಿಂದ ಜೈ ಶ್ರೀರಾಮ್ ಘೋಷಣೆ ಮೊಳಗಿದೆ.
ಸಭಾನಾಯಕ ಯಡಿಯೂರಪ್ಪ ಬಜೆಟ್ ಮಂಡಿಸಲು ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸತೊಡಗಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತು ಆರಂಭಿಸಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಿಲುಕಿ ಮಂತ್ರಿಗಿರಿಗೆ ರಾಜೀನಾಮೆ ನೀಡಿದ್ದಾರೆ. ಇದೇ ರೀತಿ ಆರು ಮಂದಿ ಸಚಿವರು ತಮ್ಮ ವಿರುದ್ಧ ಸುದ್ದಿ ಪ್ರಸಾರವಾಗಬಹುದು ಎಂಬ ಹೆದರಿಕೆಯಿಂದ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ಎಂತಹ ಬಜೆಟ್ ನೀಡುತ್ತೀರಿ ಎಂದು ವಿರೋಧಿಸಿದರು.
ಈ ಹಂತದಲ್ಲಿ ಸಿದ್ದರಾಮಯ್ಯ ಮಾತನ್ನು ಬಿಜೆಪಿ ಸದಸ್ಯರು ವಿರೋಧಿಸಿದಾಗ ಸದನದಲ್ಲಿ ಗದ್ದಲ ಆರಂಭವಾಯಿತಲ್ಲದೆ, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಏರು ಧ್ವನಿಯಲ್ಲಿ ಆರೋಪ-ಪ್ರತ್ಯಾರೋಪ ನಡೆಯಿತು. ನೀವು ಬಜೆಟ್ ಮಂಡಿಸುವ ನೈತಿಕ ಅರ್ಹತೆ ಹೊಂದಿಲ್ಲ. ನಿಮ್ಮ ನಡೆಯನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದಾಗ ಮುಖ್ಯಮಂತ್ರಿ ಗೋವಿಂದ ಕಾರಜೋಳ ವಿಧಾನಸಭೆಯ ಇತಿಹಾಸದಲ್ಲೇ ಹಿಂದೆಂದೂ ಇಂತಹ ಘಟನೆ ನಡೆದಿಲ್ಲ. ಇದಕ್ಕೆ ಕಾರಣವಾಗುತ್ತಿರುವ ಕಾಂಗ್ರೆಸ್ ನಡೆ ನಾಚಿಕೆಗೇಡಿನದು ಎಂದು ಟೀಕಿಸಿದರು. ಈ ನಡುವೆ ಇದ್ದಕ್ಕಿದ್ದಂತೆ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಘೋಷಣೆ ಮೊಳಗಿಸತೊಡಗಿದ್ದರಿಂದ ಕೆಲ ಕಾಲ ಗೊಂದಲ ಉಂಟಾಯಿತು. ಆ ಮೂಲಕ ಬಜೆಟ್ ಸಂದರ್ಭದಲ್ಲಿ ಪ್ರತಿಪಕ್ಷದ ಸಭಾತ್ಯಾಗದ ಘಟನೆ ಇದೇ ಮೊದಲ ಬಾರಿ ನಡೆದರೆ, ಜೈ ಶ್ರೀರಾಮ್ ಎಂಬ ಘೋಷಣೆ ವಿಧಾನಸಭೆಯನ್ನು ಅಚ್ಚರಿಗೆ ದೂಡಿತು.
ಮೊದಲ ಬಾರಿಗೆ ಸಭಾತ್ಯಾಗದ ನಡುವೆ ಬಜೆಟ್ ಮಂಡನೆ ಇತ್ತ ವಿಧಾನ ಪರಿಷತ್ನಲ್ಲಿ ಸಭಾನಾಯಕ ಕೋಟ ಶ್ರೀನಿವಾಸ್ ಪೂಜಾರಿಗೆ ಸಭಾಪತಿ ಬಸವರಾಜ ಹೊರಟ್ಟಿ ಬಜೆಟ್ ಮಂಡಿಸಲು ಅವಕಾಶ ಕಲ್ಪಿಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಇದು ಸಿಡಿ ಸರ್ಕಾರ, ಬಜೆಟ್ ಮಂಡಿಸುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಸದನದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಜೈ ಶ್ರೀರಾಮ್ ಘೋಷಣೆಗೆ ಬಿಜೆಪಿ ಸದಸ್ಯರು ಸಾಥ್ ನೀಡಿದರು. ನಂತರ ಕಾಂಗ್ರೆಸ್ ಸದಸ್ಯರು ಬಜೆಟ್ ಮಂಡನೆ ವಿರೋಧಿಸಿ ಸಭಾತ್ಯಾಗ ಮಾಡಿದರು.