ಬೆಂಗಳೂರು:ಚಂದ್ರಯಾನ 3 ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮುಂಜಾನೆ ನಗರಕ್ಕೆ ಆಗಮಿಸಿದ್ದಾರೆ. ಇನ್ನು ಇಸ್ರೋ ವಿಜ್ಞಾನಿಗಳ ಭೇಟಿಗೂ ಮುನ್ನ ಪ್ರಧಾನಿ ಮೋದಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಜನರನ್ನುದ್ದೇಶಿ ಮಾತನಾಡಿದರು.
ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಹೆಚ್.ಎ.ಎಲ್ ವಿಮಾನ ನಿಲ್ದಾಣದ ಮುಂದೆ ಸೇರಿದ್ದ ಜನತೆ ಉದ್ದೇಶಿಸಿ ಚುಟುಕು ಭಾಷಣ ಮಾಡಿದರು. ಇದು ಸೂರ್ಯೋದಯದ ಸಂದರ್ಭ, ಬೆಂಗಳೂರಿನಲ್ಲಿ ಸುಂದರ ಚಿತ್ರಣ ಇದೆ. ಇವತ್ತು ಇಷ್ಟೊಂದು ಜನ ಬಂದಿದೀರಾ.. ವಿಜ್ಞಾನಿಗಳ ಸಾಧನೆ ಎಲ್ಲರ ಹೆಮ್ಮೆ ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಕಾಣುತ್ತಿರುವ ಜನರ ಮೆಚ್ಚುಗೆ, ಸಂಭ್ರಮದ ದೃಶ್ಯ ನನಗೆ ಗ್ರೀಸ್‌ನಲ್ಲೂ ಕಾಣಿಸಿತ್ತು, ಜೋಹಾನ್ಸ್‌ಬರ್ಗ್‌ನಲ್ಲೂ ಕಾಣಿಸಿತ್ತು ಎಂದರು.
ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ವೇಳೆ ನಾನು ವಿದೇಶದಲ್ಲಿದ್ದೆ. ಅಲ್ಲಿಂದಲೇ ವರ್ಚುಯಲ್ ಮೂಲಕ ವೀಕ್ಷಣೆ ಮಾಡಿದ್ದೆ. ನಮ್ಮ ವಿಜ್ಞಾನಿಗಳ ಸಾಧನೆ ನೋಡಿ ನನ್ನನ್ನು ನಾನು ನಿಯಂತ್ರಣ ಮಾಡಿಕೊಳ್ಳಲಾಗಲಿಲ್ಲ. ನಾನು ಭಾರತಕ್ಕೆ ಮರಳಿದಾಗ ಮೊದಲು ಬೆಂಗಳೂರಿಗೆ ಹೋಗಬೇಕು ಅಂತ ನಿರ್ಧರಿಸಿದ್ದೆ. ಹಾಗಾಗಿ ಈಗ ಬಂದಿದ್ದು, ನಾನು ಎಲ್ಲರಿಗಿಂತ ಮೊದಲು ನಮ್ಮ ವಿಜ್ಞಾನಿಗಳಿಗೆ ನಮಸ್ಕರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸಿಎಂ, ಡಿಸಿಎಂ, ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದೆ. ನಾನು ಬೆಳಗ್ಗೆ ಬರುತ್ತೇನೆ, ನೀವು ಬರುವ ಕಷ್ಟ ತಗೋಬೇಡಿ ಅಂತ ಕೇಳಿಕೊಂಡಿದ್ದೆ. ನಾನು ಬಂದು ವಿಜ್ಞಾನಿಗಳಿಗೆ ಅಭಿನಂದಿಸಿ ಹೊರಟು ಹೋಗುತ್ತೇನೆ ಎಂದು ತಿಳಿಸಿ ನಾನೇ ಅವರಲ್ಲಿ ಸ್ವಾಗತಕ್ಕೆ ಬರದಂತೆ ವಿನಂತಿಸಿಕೊಂಡಿದ್ದೆ. ಅದರಂತೆ ಸಿಎಂ, ಡಿಸಿಎಂ ಅವರು ಪ್ರೋಟೋಕಾಲ್ ಪಾಲನೆ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ನಾನು ಆಭಾರಿ ಆಗಿದ್ದೇನೆ ಎಂದರು.
ನಾನು ಈಗ ಇಲ್ಲಿ ಭಾಷಣ ಮಾಡಲ್ಲ. ವಿಜ್ಞಾನಿಗಳ ಬಳಿ ಹೋಗಲು ಕಾತರನಾಗಿದ್ದೇನೆ. ನೀವೆಲ್ಲ ಬಂದಿದ್ದೀರಾ.. ಮಕ್ಕಳೂ ಸಹ ಇಲ್ಲಿ ಬಂದಿದ್ದಾರೆ. ಮಕ್ಕಳೇ ನಮ್ಮ ದೇಶದ ಭವಿಷ್ಯ ಎಂದು ಜೈ ಜವಾನ್, ಜೈಕಿಸಾನ್, ಜೈ ವಿಜ್ಞಾನ ಘೋಷಣೆ ಮೊಳಗಿಸುತ್ತಾ ಇಸ್ರೋ ಕಡೆ ತೆರಳಿದರು.