ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರಕ್ಕೆ ತಾರಾ ಮೆರುಗು ಬಂದಿದ್ದು, ನಟ ಜಗ್ಗೇಶ್ ಅವರು ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಮತಬೇಟೆ ನಡೆಸಿದ್ರು.
ಸತ್ಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಅವರು, ಕಮಲಾ ನಗರ, ಬಸವೇಶ್ವರ ನಗರ ಸೇರಿದಂತೆ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿದರು. ಗೋಪಾಲಯ್ಯ ಅವರ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆ ಅಭಿಪ್ರಾಯ ಇದೆ. ಗೋಪಾಲಯ್ಯ ಎಂಬ ನದಿ ಬಿಜೆಪಿ ಎಂಬ ಅದ್ಭುತ ನದಿ ಜೊತೆ ಸಮ್ಮಿಲನವಾಗಿದೆ. ಗೋಪಾಲಯ್ಯ ಸೇರಿದಂತೆ ೧೫ ಜನ ನಮ್ಮ ಪಕ್ಷಕ್ಕೆ ಬಂದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೋದಿ ಎಂಬ ಅಲೆ ದೇಶದಲ್ಲಿದೆ ಎಂದರು.
ಮತಬೇಟೆ ವೇಳೆ ರಾಮನನ್ನು ಜಪಿಸಿದ ಜಗ್ಗೇಶ್ ಇನ್ನು, ಪ್ರಚಾರದಲ್ಲಿ ರಾಮ ಜನ್ಮಭೂಮಿ ವಿಚಾರ ಪ್ರಸ್ತಾಪಿಸಿದ ನವರಸ ನಾಯಕ, ಸುಮಾರು ದಶಕಗಳ ಕಾಲ ವಿವಾದಿಂದಾಗಿ ಶ್ರೀರಾಮನ ಹೆಸರೇಳುವುದು ಕಷ್ಟ ಎನಿಸುತ್ತಿತ್ತು. ಆದ್ರೀಗ ನಮಗೆ ಶ್ರೀರಾಮ ಸಿಕ್ಕಿದ್ದಾನೆ, ನಾವು ಸ್ವಾಭಿಮಾನಿಗಳಾಗಿದ್ದೇವೆ. ಶ್ರೀರಾಮನ ಹೆಸರನ್ನು ಹೇಳೋಕೆ ಹಿಂಜರಿಯೊಲ್ಲ. ಇಡೀ ದೇಶದಲ್ಲಿ ಎಲ್ಲ ಧರ್ಮಿಯರು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ ಎಂದರು.
ಇದೇ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಜಗ್ಗೇಶ್ ಅವರು, ಕುಮಾರಸ್ವಾಮಿ ಅವರಪ್ಪನಾಣೆ ಸಿ.ಎಂ ಆಗಲ್ಲ ಅಂತ ಅಂತಿದ್ರಿ. ಆದ್ರೆ ಅಂದು ಮುಖ್ಯಮಂತ್ರಿಯಾಗಿದ್ದ ನೀವೇ ಹೆಚ್ಡಿಕೆ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದಿತ್ತು. ಬಹುಮತ ಇಲ್ಲದಿದ್ರೂ ಕೂಡಾ ಅಪವಿತ್ರ ಮೈತ್ರಿ ಸರ್ಕಾರ ರಚಿಸಿದ್ರಿ ಎಂದು ಕುಟುಕಿದ್ರು.
ಮೈತ್ರಿ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಲಿಲ್ಲ. ಪ್ರತಿದಿನ ಕಿತ್ತಾಟ, ಕೆಸರೆರಚಾಟವೇ ನಡೀತಿತ್ತು. ಅದ್ರಿಂದ ಬೇಸತ್ತು 17 ಜನ ಶಾಸಕರು ನಿಮ್ಮ ಪಕ್ಷಗಳಿಂದ ಆಚೆ ಬಂದಿದ್ದಾರೆ. ಅವರನ್ನ ಗೆಲ್ಲಿಸಿ ಯಡಿಯೂರಪ್ಪರನ್ನ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಬೇಕಿದೆ. 15 ಜನ ಶಾಸಕರನ್ನೂ ಸಚಿವರನ್ನಾಗಿ ಮಾಡಬೇಕಿದೆ ಎಂದು ಜಗ್ಗೇಶ್ ಮತಯಾಚಿಸಿದ್ರು.