ಬೆಂಗಳೂರು: ನೂತನ ಕೈಗಾರಿಕಾ ನೀತಿಯಲ್ಲಿ ಸಾಕಷ್ಟು ವಿಶೇಷ ಅನುಕೂಲ ಮಾಡಲಾಗಿದ್ದು, ಬೆಂಗಳೂರು ನಗರ ಹೊರತುಪಡಿಸಿ ಬೇರೆ ಜಿಲ್ಲೆಗಳತ್ತ ಗಮನ ಹರಿಸುವಂತೆ ಕೈಗಾರಿಕೋದ್ಯಮಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕರೆ ನೀಡಿದ್ದಾರೆ.
ರಾಜ್ಯದ 2, 3ನೇ ಹಂತದ ನಗರಗಳಲ್ಲಿ ಹೂಡಿಕೆಗೆ ಮುಂದಾಗಿ: ಉದ್ಯಮಿಗಳಿಗೆ ಸಚಿವ ಶೆಟ್ಟರ್ ಕರೆ - Jagdish Shettar, Minister of Mass Media and Industry
ಬೆಂಗಳೂರು ನಗರದಂತೆಯೇ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಏರೋ ಇಂಡಿಯಾ 2021ನೇ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧ್ಯಕ್ಷತೆಯಲ್ಲಿ ಏರೋ ಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ರಾಜ್ಯದಲ್ಲಿ ಇರುವ ವಿಫುಲ ಅವಕಾಶಗಳ ಬಗ್ಗೆ ತಿಳಿಸುವ ಸಮಾವೇಶದಲ್ಲಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಮೊದಲಿನಿಂದಲೂ ಕೈಗಾರಿಕಾ ಸ್ನೇಹಿ ರಾಜ್ಯವಾಗಿದೆ. ಹಲವಾರು ನೂತನ ನೀತಿಗಳು ಹಾಗೂ ಕಾಯ್ದೆಗಳು ರಾಜ್ಯವನ್ನು ದೇಶದಲ್ಲಿಯೇ ಬಂಡವಾಳ ಹೂಡಿಕೆಯ ಪ್ರಮುಖ ರಾಜ್ಯವನ್ನಾಗಿಸಿದೆ. ನೀತಿ ಆಯೋಗದ ಸೂಚ್ಯಂಕದಲ್ಲಿ ಸತತ ಎರಡು ವರ್ಷಗಳ ಕಾಲ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ರಾಜ್ಯ ಸಂಶೋಧನೆ ಹಾಗೂ ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿದ್ದು, ಸ್ಟಾರ್ಟ್ ಅಪ್‌ಗಳ ರಾಜಧಾನಿ ಎಂದೇ ಹೆಸರುವಾಸಿಯಾಗಿದೆ. ಕೈಗಾರಿಕಾ ಸೌಲಭ್ಯ ಅಧಿನಿಯಮವನ್ನು ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಬಹಳ ಸುಲಭವಾಗಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಬಂಡವಾಳ ಹೂಡಿಕೆಗೆ ಮುಂದಾಗುತ್ತಿವೆ. ಆದರೆ, ರಾಜ್ಯದ ಇತರ ಎರಡನೇ ಹಾಗೂ ಮೂರನೇ ಹಂತದ ಜಿಲ್ಲೆಗಳಲ್ಲೂ ಬಂಡವಾಳ ಆಕರ್ಷಿಸಲು ಅನುಕೂಲ ಮಾಡಿಕೊಡುವಂತಹ ಕ್ರಾಂತಿಕಾರಿ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದರು.