ಬೆಂಗಳೂರು:ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಿ ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಇಂದು ಸಂಜೆ 4 ರಿಂದ 6ರವರೆಗೆ ಕೆಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಲಾಗಿದೆ.
ನಗರದ ಓಲ್ಡ್ ಏರ್ಪೋರ್ಟ್ ರಸ್ತೆ, ಇನ್ಫ್ಯಾಂಟ್ರಿ ರಸ್ತೆ, ರಾಜಭವನ ರಸ್ತೆ, ಕಬ್ಬನ್ ರಸ್ತೆ, ಕ್ವೀನ್ಸ್ ರಸ್ತೆ ಹಾಗೂ ಎಂ.ಜಿ. ರಸ್ತೆಗಳಲ್ಲಿ ಇಂದು ಸಂಜೆ 4 ರಿಂದ 6ರವರೆಗೆ ಸಂಚಾರ ದಟ್ಟಣೆ ಏರ್ಪಡುವ ಸಾಧ್ಯತೆ ಇರುವುದರಿಂದ ಈ ರಸ್ತೆಗಳನ್ನು ಬಳಸದೇ ಬೇರೆ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.
ನಾಳೆ ಎಂ.ಎಸ್. ರಾಮಯ್ಯನಗರದ ಜ್ಞಾನ ಗಂಗೋತ್ರಿ ಕ್ಯಾಂಪಸ್ನಲ್ಲಿ ನಡೆಯಲಿರುವ ಗೋಕುಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರಾದ ದಿವಂಗತ ಡಾ.ಎಂ.ಎಸ್. ರಾಮಯ್ಯರ ಜನ್ಮಶತಮಾನೋತ್ಸವದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭಾಗಿಯಾಗಲಿದ್ದಾರೆ.
ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿರುವ ಉಪರಾಷ್ಟ್ರಪತಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮೊದಲ ಬಾರಿಗೆ ಇಂದು ತಮಿಳುನಾಡಿಗೆ ಭೇಟಿ ನೀಡಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ಉಪರಾಷ್ಟ್ರಪತಿಯನ್ನು ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಇತರ ಗಣ್ಯರು ಬರಮಾಡಿಕೊಂಡರು. ತಮಿಳುನಾಡಿಗೆ ಭೇಟಿ ನೀಡಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಇತ್ತೀಚೆಗೆ ನಿರ್ಮಿಸಲಾದ ಸುಧಾ ಮತ್ತು ಶಂಕರ್ ಇನ್ನೋವೇಶನ್ ಹಬ್‌ನಲ್ಲಿರುವ ಐಐಟಿ ಮದ್ರಾಸ್ ಸೆಂಟರ್ ಫಾರ್ ಇನ್ನೋವೇಶನ್ (CFI) ನ ಹೊಸ ಲ್ಯಾಬ್ ಒಂದನ್ನು ಇಂದು ಉದ್ಘಾಟಿಸಿದ್ದಾರೆ.
ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮನ: ಈ ಕೇಂದ್ರವು ವಿದ್ಯಾರ್ಥಿಗಳು ಮತ್ತು ಸಂಶೋಧಕರ ನಾವೀನ್ಯತೆ ಮತ್ತು ಉದ್ಯಮಶೀಲತೆ (I&E) ಚಟುವಟಿಕೆಗಳನ್ನು ಬೆಂಬಲಿಸಲು ಮತ್ತು ಪ್ರೋತ್ಸಾಹಿಸಲು ಸಮರ್ಪಿಸಲಾಗಿದೆ. ಲ್ಯಾಬ್ ಉದ್ಘಾಟಿಸಿದ ನಂತರ ಇನ್ನೋವೇಶನ್ ಸೆಂಟರ್ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದ ನಂತರ ನಾಳೆ ಡಾ.ಎಂ.ಎಸ್. ರಾಮಯ್ಯರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮಿಳುನಾಡಿನಿಂದ ಇಂದು ಸಂಜೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ಇದನ್ನೂ ಓದಿ:ಉಸಿರಿರುವ ತನಕ ನಿಮ್ಮ ಸೇವೆ ಮಾಡುವೆ: ಶಿಗ್ಗಾಂವಿ ಜನರಿಗೆ ಸಿಎಂ ಬೊಮ್ಮಾಯಿ ಭರವಸೆ