ಕರ್ನಾಟಕ

karnataka

ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಡೌಟ್

By

Published : May 20, 2023, 7:52 AM IST

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಲಭಿಸುವುದು ಅನುಮಾನವಿದೆ.

Shettar Savadi Doubt Ministership in First Phase
ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ

ಬೆಂಗಳೂರು:ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿ ಪಕ್ಷಕ್ಕೆ ಬಲ ತಂದುಕೊಟ್ಟಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಇಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಅನುಮಾನವಿದೆ. ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ಈ ಇಬ್ಬರೂ ಮುಖಂಡರಿಗೆ ಮೊದಲ ಹಂತದಲ್ಲಿಯೇ ಸಚಿವರನ್ನಾಗಿ ನೇಮಕ ಮಾಡಲಾಗುತ್ತದೆ ಎನ್ನುವ ಸುದ್ದಿ ದಟ್ಟವಾಗಿ ಹರಡಿತ್ತು. ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಚುನಾವಣೆಯಲ್ಲಿ ಸೋತಿದ್ದರೂ ಸಹ ಅವರಿಗೆ ಸಚಿವ ಸ್ಥಾನ ನೀಡುವ ಕುರಿತಂತೆ ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆಗಳು ನಡೆದಿದ್ದವು ಎಂದು ಹೇಳಲಾಗಿದೆ.

ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆಗಳು ನಡೆದವು.

ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲಿ ಕೇಳಿ ಬಂದಿರುವ ಹೆಸರುಗಳು: ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬದಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರಿಂದ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರನ್ನು ಸಚಿವರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ವೀರಶೈವ ಲಿಂಗಾಯತ ಸಮುದಾಯದಿಂದ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರು ಸಚಿವ ಹುದ್ದೆಗಾಗಿ ಒತ್ತಡವನ್ನು ಹೇರತೊಡಗಿದ್ದರು. ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಎಸ್. ಎಸ್. ಮಲ್ಲಿಕಾರ್ಜುನ, ಶಿವಾನಂದ ಪಾಟೀಲ್ ಇವುಗಳ ಹೆಸರು ದೆಹಲಿಯಲ್ಲಿ ಶುಕ್ರವಾರ ರಾತ್ರಿ ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಸಭೆಯಲ್ಲಿ ಚರ್ಚೆಗೆ ಬಂದಿದೆ.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಮತ್ತು ಇತರೆ ಪ್ರಮುಖ ಮುಖಂಡರು ಭಾಗವಹಿಸಿದ್ದ ಸಭೆಯಲ್ಲಿ ವೀರಶೈವ ಸಮುದಾಯದಿಂದ ನೇಮಕ ಮಾಡುವ ಸಚಿವರ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ.

ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಇದ್ದಾರೆ

ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ:ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಶಿವಾನಂದ ಪಾಟೀಲ್, ಶಾಸಕರಾದ ಷಡಕ್ಷರಿ, ಲಕ್ಷ್ಮಿ ಹೆಬ್ಬಾಳ್ಕರ್, ಯು. ಬಿ. ಬಣಕಾರ್, ಹೆಚ್. ಕೆ. ಪಾಟೀಲ್, ಜಿ.ಎಸ್. ಪಾಟೀಲ್, ಬಿ. ಆರ್. ಪಾಟೀಲ್, ಸಿ. ಎಸ್. ನಾಡಗೌಡ, ಜಿ. ಟಿ. ಪಾಟೀಲ್ ಸೇರಿದಂತೆ ಹಲವಾರು ಲಿಂಗಾಯತ ಸಮುದಾಯದ ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅದಕ್ಕಾಗಿ ಲಾಬಿಯನ್ನೂ ಸಹ ನಡೆಸಿದ್ದರು ಎನ್ನಲಾಗಿದೆ.

ಲಿಂಗಾಯತ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲು ಒತ್ತಾಯ:ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರು ಶಾಮನೂರು ಶಿವಶಂಕರಪ್ಪನವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಇತರ ಪ್ರಮುಖರಿಗೆ ಪತ್ರ ಬರೆದು ವೀರಶೈವ ಲಿಂಗಾಯತ ಸಮುದಾಯದ ಶಾಸಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ನೀಡಿದ್ದರಿಂದ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು.

ಇದನ್ನೂ ಓದಿ:ಇಂದು ಸಿಎಂ, ಡಿಸಿಎಂ ಜೊತೆಗೆ ಬೆರಳೆಣಿಕೆಯ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ

ABOUT THE AUTHOR

...view details