ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರ್ಪಡೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಬಲವನ್ನು ಇನ್ನಷ್ಟು ಹೆಚ್ಚಿಸಲು ಸಹಕಾರ ಆಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಸೇರಬೇಕು ಎಂಬ ಆಶಯದೊಂದಿಗೆ ಪಕ್ಷದ ಸದಸ್ಯತ್ವವನ್ನು ಇಂದು ಸ್ವೀಕರಿಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಂಸದ ಅಮರ್ ಸಿಂಗ್ ಪಾಟೀಲ್ ಪಕ್ಷ ಸೇರುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಪಕ್ಷದ ನೀತಿ ಹಾಗೂ ಐಡಿಯಾಲಜಿಗಳ ಅರಿವು ಶೆಟ್ಟರ್ಗೆ ಇದೆ. ಅವರು ಬಿಜೆಪಿಯಲ್ಲಿ ಇದ್ದು, ಅಲ್ಲಿನ ಕಾರ್ಯನಿರ್ವಹಣೆ ಹೇಗೆ ನಡೆಸಿದ್ದಾರೆ ಎನ್ನುವುದು ನಿಮಗೆ ಗೊತ್ತು. ಇಂದು ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವ ಸಲುವಾಗಿ ಕಾಂಗ್ರೆಸ್ನ ಐಡಿಯಾಲಜಿಯನ್ನು ಒಪ್ಪಿ ಸೇರ್ಪಡೆ ಆಗುತ್ತಿದ್ದಾರೆ. ಈವರೆಗೆ ತಮ್ಮ ಶಕ್ತಿಯನ್ನು ಬಳಸಿ ಬಿಜೆಪಿಯ ಏಳಿಗೆಗೆ ಶ್ರಮಿಸಿದ್ದರು ಎಂದರು.
ಇದನ್ನೂ ಓದಿ :ಬಿಜೆಪಿ ತೊರೆದ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ನಡೆದು ಬಂದ ಹಾದಿಯ ಹಿನ್ನೋಟ..
ಇಂದು ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಅವರು ಮಾತ್ರವಲ್ಲ, ಆ ಭಾಗದಲ್ಲಿನ ಕಾಂಗ್ರೆಸ್ ಶಕ್ತಿಯನ್ನು ಸಹ ಹೆಚ್ಚಿಸಿದ್ದಾರೆ. ಶೆಟ್ಟರ್ ತಂದೆ ಸಹ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಮಯ ರಾಜಕಾರಣ ಮಾಡಿದ್ದರು. ಅತಿ ದೊಡ್ಡ ಶಿಕ್ಷಣ ಸಂಸ್ಥೆಯನ್ನು ಸಹ ಹೊಂದಿದ್ದಾರೆ ಎಂದು ಹೇಳಿದರು.