ಬೆಂಗಳೂರು: ಬಿಜೆಪಿ ತೊರೆದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗುವುದು ಖಚಿತವಾಗಿದೆ. ಇಂದು ಬೆಳಗ್ಗೆ ಮಲ್ಲಿಕಾರ್ಜುನ ಖರ್ಗೆ ಕರೆದಿರುವ ಸುದ್ದಿಗೋಷ್ಠಿಯಲ್ಲಿಯೇ ಶೆಟ್ಟರ್ ಕೈ ಸೇರ್ಪಡೆ ಆಗಲಿದ್ದು, ಈಗಾಗಲೇ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ.
ಇನ್ನೊಂದಡೆ, 67 ಮಂದಿ ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲಾ ಲಿಂಗಾಯತ ಸಮುದಾಯದ ನಾಯಕರು ನಮ್ಮ ಬೆಂಬಲಕ್ಕೆ ಬರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ನಾಯಕರು ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಜಗದೀಶ್ ಶೆಟ್ಟರ್ ಜೊತೆ ನಿನ್ನೆ ಸಮಾಲೋಚಿಸಿದ್ದೇವೆ. ಆದರೆ ಅವರು ಯಾವುದೇ ಬೇಡಿಕೆಯನ್ನು ನಮ್ಮ ಮುಂದಿಟ್ಟಿಲ್ಲ. ನಾನು ಈ ಸಂದರ್ಭದಲ್ಲಿ ಏನನ್ನು ಹೇಳಲು ಇಚ್ಛಿಸುವುದಿಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗೋಷ್ಟಿ ಕರೆದಿದ್ದು, ಅಲ್ಲಿ ಎಲ್ಲವನ್ನು ವಿವರಿಸಲಿದ್ದಾರೆ. ಬಿಜೆಪಿ ಪಕ್ಷದ ಸದಸ್ಯತ್ವಕ್ಕೂ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿದ್ದಾರೆ. ಇಂದು ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದು, ಮುಂದಿನ ವಿಚಾರವನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರು ವಿವರಿಸುತ್ತಾರೆ ಎಂದು ಹೇಳಿದರು. ಬೆಂಗಳೂರಿನಲ್ಲಿರುವ ಶಾಮನೂರು ಶಿವಶಂಕರಪ್ಪ ನಿವಾಸದಿಂದ ಜಗದೀಶ್ ಶೆಟ್ಟರ್ ಕಾರಿನಲ್ಲಿ ಕೆಪಿಸಿಸಿ ಅಕಚೇರಿಗೆ ತೆರಳಿದ್ದಾರೆ. ಮೂರು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿದ ಬಳಿಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಜೊತೆ ಒಂದೇ ಕಾರಿನಲ್ಲಿ ಆಗಮಿಸಿ ಕಚೇರಿಯನ್ನು ತಲುಪಿದರು.