ಕಾಂಗ್ರೆಸ್ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್.. ಬೆಂಗಳೂರು:ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಉತ್ತಮವಾಗಿದ್ದು, ಹೊಸ ಅಲೆ ಹರಿಯುತ್ತಿದೆ. ಇಲ್ಲಿ ಎಲ್ಲರಿಗೂ ಪಕ್ಷ ಬೆಳೆಸುವ ಶಕ್ತಿ ಸಾಮರ್ಥ್ಯ ಹಾಗೂ ಆಶಯ ಇದೆ. ನಾನು ಸಹ ಒಬ್ಬನಾಗಿ ಪಕ್ಷವನ್ನು ಬೆಳೆಸಲು ಶ್ರಮಿಸುತ್ತೇನೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಕಾಂಗ್ರೆಸ್ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು "ಇಂದು ನಾನು ಭಾರತೀಯ ಜನತಾ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದೇನೆ. ಬಹಳ ಜನರಿಗೆ ಆಚರಿ ಆಗಿದೆ. ಇವರು ಯಾಕೆ? ಕಾಂಗ್ರೆಸ್ ಪಕ್ಷ ಸೇರಿದರು ಎಂಬ ಚರ್ಚೆ ಆಗಿರುವುದು ಸಹಜ. ಭಾರತೀಯ ಜನತಾ ಪಕ್ಷನ ಕಟ್ಟಿ ಬೆಳೆಸಿದ ವ್ಯಕ್ತಿ ನಾನು. ಆದರೆ ಕಳೆದ ಕೆಲ ದಿನಗಳಿಂದ ಅಲ್ಲಿ ಗೌರವ ಇರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಒಂದು ಸಂಘಟನೆ ಬಲ ತರುವ ಕೆಲಸ ಮಾಡಿದೆ. ಪಕ್ಷಕ್ಕೆ ಉತ್ತಮ ಸ್ಥಾನಮಾನ ನೀಡಿದ್ದೆ. ಪಕ್ಷ ನನಗೆ ನೀಡಿದ ಜವಾಬ್ದಾರಿಗೆ ಪ್ರತಿಯಾಗಿ ಪಕ್ಷಕ್ಕೆ ಒಂದಿಷ್ಟು ಸಂಘಟನೆಯನ್ನು ಹೊರಡುವ ಕಾರ್ಯ ಮಾಡಿದೆ.
ಟಿಕೆಟ್ಗಾಗಿ ಶ್ರಮಿಸುವ ಅಗತ್ಯ ಇರ್ಲಿಲ್ಲ:ಆರು ಬಾರಿ ಶಾಸಕರಾಗಿ ಪಕ್ಷಕ್ಕಾಗಿ ದುಡಿದಿದ್ದೆ. 25,000 ಮತಗಳ ಅಂತರದಿಂದ ನಿರಂತರವಾಗಿ ಗೆಲ್ಲುತ್ತ ಬಂದಿದ್ದೆ. ಇದು ಸ್ಪರ್ಧಿಸಿದ್ದರೆ ಏಳನೇ ಬಾರಿ ಆಗುತ್ತಿತ್ತು. ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಆಗುತ್ತಿದ್ದವು. ಒಬ್ಬ ಹಿರಿಯನಾಗಿ ನಾನು ಟಿಕೆಟ್ಗಾಗಿ ಶ್ರಮಿಸುವ ಅಗತ್ಯ ಇರ್ಲಿಲ್ಲ. ಆದರೆ ಪಕ್ಷದ ಟಿಕೆಟ್ ಇಲ್ಲ ಎಂದು ಹೇಳಿದಾಗ ಆಘಾತ ಆಯ್ತು ಎಂದರು.
ನನಗೆ ಅಧಿಕಾರ ಬೇಕಿರಲಿಲ್ಲ:ನಿಮಗೆ ರಾಷ್ಟ್ರೀಯ ರಾಜಕಾರಣದಲ್ಲಿ ಅವಕಾಶ ನೀಡುತ್ತೇವೆ ಅಥವಾ ಪಕ್ಷದ ಬೇರೆ ಚಟುವಟಿಕೆಯಲ್ಲಿ ಬಳಸಿಕೊಳ್ಳುತ್ತೇವೆ ಎಂದು ಕನಿಷ್ಠ ಒಂದೆರಡು ವಾರ ಮುಂಚಿತವಾಗಿ ತಿಳಿಸಿದ್ದರೂ ಬೇಸರ ಆಗುತ್ತಿರಲಿಲ್ಲ. ಉತ್ತಮ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವನು ನಾನು. ತಂದೆಯವರು ಸಹ ರಾಜಕಾರಣಿಯಾಗಿದ್ದನ್ನ ಗಮನಿಸಿದ್ದೇನೆ. ಕ್ರಿಯಾಶೀಲವಾಗಿ ರಾಜಕೀಯದಲ್ಲಿ ತೊಡಗಿದ್ದ ನನ್ನ ಯಾಕೆ ಪಕ್ಷ ಕಡೆಗಣಿಸಿತು ಎನ್ನುವುದು ಈಗಲೂ ಅರಿವಾಗುತ್ತಿಲ್ಲ. ನನಗೆ ಅಧಿಕಾರ ಬೇಕಿರಲಿಲ್ಲ. ಶಾಸಕನಾಗಿ ನನ್ನ ಬಲ ತೋರಿಸುವ ಅಗತ್ಯ ಇರ್ಲಿಲ್ಲ. ಆದರೆ ನಾಮಪತ್ರ ಸಲ್ಲಿಕೆ ಕಡೆಯ ಕ್ಷಣ ಸಮೀಪಿಸುತ್ತಿರುವಾಗ ನಿಮಗೆ ಟಿಕೆಟ್ ಸಿಗುವುದಿಲ್ಲ ಒಪ್ಪಿಗೆ ಪತ್ರ ಕಳಿಸಿಕೊಡಿ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ನೀಡಿತು.
ಕೊಂಚ ಮುಂಚಿತವಾಗಿ ನಿಮಗೆ ಬೇರೆ ಅವಕಾಶವನ್ನು ನೀಡುತ್ತಿವೆ. ಚುನಾವಣಾ ರಾಜಕೀಯದಿಂದ ಹೊರಬನ್ನಿ ಎಂಬ ಮಾಹಿತಿಯನ್ನು ಪಕ್ಷ ನೀಡಬಹುದಿತ್ತು. ಹೊಸದಾಗಿ ಅರ್ಜಿ ನೀಡಿದವರಿಗೆ ಇಲ್ಲವೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದವರಿಗೆ ನೀಡುವ ಮಾದರಿಯಲ್ಲಿ ನನಗೆ ಸಂದೇಶ ನೀಡಿದರೆ ಹೇಗೆ ಸಹಿಸಿಕೊಳ್ಳಲಿ. ಇವರು ನಡೆದುಕೊಂಡ ರೀತಿ ಸರಿ ಅನಿಸಲಿಲ್ಲ. ನಾನು ಬೇಸರಗೊಂಡ ಬಳಿಕ ಸಮಾಧಾನಪಡಿಸುವ ಪ್ರಯತ್ನಗಳು ನಡೆದವು. ಆದರೆ ಇದು ಮುಂಚಿತವಾಗಿಯೇ ನಡೆಸಬಹುದಿತ್ತಲ್ಲ?. ಇದು ಪಕ್ಷದ ಸ್ವಾಭಿಮಾನಕ್ಕೆ ಹಾಗೂ ನನ್ನ ಸ್ವಾಭಿಮಾನಕ್ಕೆ ಪೆಟ್ಟು ನೀಡಿತು. ಅನಿವಾರ್ಯವಾಗಿ ಪಕ್ಷದ ಕೆಲ ಆಪ್ತರು ಹಾಗೂ ಕ್ಷೇತ್ರದ ಮುಖಂಡರ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡೆ ಎಂದರು.
ಕಾಂಗ್ರೆಸ್ ತತ್ವ, ಸಿದ್ಧಾಂತ ಒಪ್ಪಿ ಪಕ್ಷ ಸೇರ್ಪಡೆ: ಎಂ.ಬಿ ಪಾಟೀಲ್ ಹಾಗೂ ಮತ್ತಿತರ ನಾಯಕರು ನಮ್ಮನ್ನ ಸಂಪರ್ಕಿಸಿ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಕಾಂಗ್ರೆಸ್ಗೆ ಬಂದು ಬಿಡಿ ಎಂದು ಮನವಿ ಮಾಡಿದರು. ಸ್ವಾಭಿಮಾನಕ್ಕೆ ಧಕ್ಕೆಯಾದ ಸ್ಥಳದಲ್ಲಿ ಕಷ್ಟಪಟ್ಟು ಉಳಿಯುವುದಕ್ಕಿಂತ ಕಾಂಗ್ರೆಸ್ ತತ್ವ, ಸಿದ್ಧಾಂತವನ್ನು ಒಪ್ಪಿ ಸೇರ್ಪಡೆ ಆಗುವುದೇ ಸೂಕ್ತ ಎಂದು ನಿರ್ಧರಿಸಿದೆ. ನನಗೆ ಯಾವತ್ತೂ ಪಕ್ಷ ಮುಖ್ಯ, ವ್ಯಕ್ತಿ ಮುಖ್ಯ ಅಲ್ಲ ಎಂದು ಬೆಳೆದು ಬಂದ ವ್ಯಕ್ತಿ ನಾನು. ಆದರೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಅಷ್ಟು ಸರಿ ಇಲ್ಲ. ಕೆಲ ನಾಯಕರು ಇಡೀ ರಾಜ್ಯ ಬಿಜೆಪಿ ರಾಜಕಾರಣದ ಹಿಡಿತವನ್ನು ತಮ್ಮ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು.
ಅಧಿಕಾರದ ಆಸೆ ಇಲ್ಲ: ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಮಾದರಿ ಸನ್ನಿವೇಶ ಗೋಚರಿಸುತ್ತಿದೆ. ಸಾಕಷ್ಟು ತಂಡಗಳ ರಚನೆಯಾಗಿದ್ದು, ಆದರೆ ಇಲ್ಲಿನ ಬೆಳವಣಿಗೆಯನ್ನು ಗಮನಿಸಿ ಯಾವ ತಂಡಗಳೂ ಕರ್ನಾಟಕಕ್ಕೆ ಬರಲೇ ಇಲ್ಲ. ನಾನು ನೇರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಅವರನ್ನ ಭೇಟಿ ಮಾಡಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ತಿಳಿಸಿದ ನಂತರ ನನ್ನನ್ನು ಮನವೊಲಿಸುವ ಪ್ರಯತ್ನಗಳು ಆರಂಭವಾದವು. ನಾನು ಸಾಕಷ್ಟು ಅಧಿಕಾರ ಅನುಭವಿಸಿದ್ದು, ಇನ್ನಷ್ಟು ಅಧಿಕಾರದ ಆಸೆ ಇಲ್ಲ. ಆದರೆ ರಾಜ್ಯದಲ್ಲಿ ಕೆಲವರು ಪಕ್ಷದ ಹಿಡಿತ ಸಾಧಿಸಲು ಹೊರಟು ಹಿರಿಯ ನಾಯಕರನ್ನ ಕಡೆಗಣಿಸುತ್ತಿರುವುದು ಸರಿ ಕಾಣುತ್ತಿಲ್ಲ. ಇಲ್ಲಿ ನನ್ನನ್ನು ನಡೆಸಿಕೊಂಡಿರುವ ರೀತಿ ನೋಡಿದರೆ ಜಗದೀಶ್ ಶೆಟ್ಟರ್ ಪಕ್ಷದಲ್ಲಿ ಇರುವುದು ಬೇಡ ಎಂಬ ಭಾವನೆ ಇತ್ತು ಅನಿಸುತ್ತದೆ ಎಂದು ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ನಾಯಕರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಪಕ್ಷದಲ್ಲಿ 2ನೇ ಹಿರಿಯ ನಾಯಕ ನಾನಾಗಿದ್ದು ಸಕ್ರಿಯವಾಗಿ ಉಳಿದರೆ ಇವರೇ ಪ್ರಮುಖ ನಾಯಕರಾಗಿ ಬೆಳೆದು ಬಿಡಬಹುದು ಎಂಬ ಆತಂಕ ಕೆಲ ಬಿಜೆಪಿ ನಾಯಕರಿಗೆ ಆಗಿದೆ. ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸಹ ತಿಳಿಸಿದೆ. ನನಗೆ ಯಾವುದೇ ಅಧಿಕಾರ ಬೇಡ. ಬಿಜೆಪಿ ಪಕ್ಷದಿಂದ ಧಾರವಾಡ ಕೇಂದ್ರ ಕ್ಷೇತ್ರದಿಂದ ಟಿಕೆಟ್ ನೀಡಿ. ಶಾಸಕನಾಗಿ ಆಯ್ಕೆಯಾಗುತ್ತೇನೆ. ಆರು ತಿಂಗಳು ಶಾಸಕನಾಗಿ ಮುಂದುವರೆದು ಗೌರವಯುತವಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನೀವು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಿ ಎಂದು ಸಹ ತಿಳಿಸಿದ್ದೆ. ಆದರೆ ನನ್ನ ಜತೆ ಸಂಧಾನಕ್ಕೆ ಬಂದ ಬಿಜೆಪಿ ನಾಯಕರು ಅದನ್ನ ಒಪ್ಪಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅತ್ಯಂತ ಕೀಳಾಗಿ ನಡೆಸಿಕೊಳ್ಳಲಾಗಿದೆ- ಶೆಟ್ಟರ್:ಹುಬ್ಬಳ್ಳಿ-ಧಾರವಾಡದ ಜನರು ನೀಡಿದ ಶಕ್ತಿಯಿಂದ ಜಗದೀಶ್ ಶೆಟ್ಟರ್ ಒಬ್ಬ ನಾಯಕನಾಗಿ ಬೆಳೆದಿದ್ದಾನೆ ಎಂಬ ಮಾತನ್ನು ಹೇಳಲು ಬಯಸುತ್ತೇನೆ. ಸಮಾಜದ ಎಲ್ಲ ವರ್ಗದ ಜನರು ಸೇರಿ ನನ್ನನ್ನು ಬೆಳೆಸಿದ್ದಾರೆ. ನನಗೆ ಯಾವುದೇ ಸ್ಥಾನಮಾನ ಬೇಡ, ಕೇವಲ ಒಬ್ಬ ಹಿರಿಯ ರಾಜಕಾರಣಿಯಾಗಿ ಗೌರವ ಸಿಕ್ಕರೆ ಸಾಕು. ಅದನ್ನು ಬಿಜೆಪಿ ಪಕ್ಷ ಮಾಡಲಿಲ್ಲ. ಗೌರವಯುತವಾಗಿ ನಡೆಸಿಕೊಂಡು ಶೆಟ್ಟರ್ ಅವರೇ ನೀವು ಸಕ್ರಿಯ ರಾಜಕಾರಣದಿಂದ ದೂರ ಉಳಿದು ಬಿಡಿ ಎಂದು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಆದರೆ ರಾಜಕಾರಣದಲ್ಲಿ ನನ್ನನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್.. 150 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಖರ್ಗೆ