ಬೆಂಗಳೂರು :ಕಾಂಗ್ರೆಸ್ನವರಿಗೆ ಮುಸ್ಲಿಮರ ಮೇಲೆ ಪ್ರೀತಿಯಿದ್ದಿದ್ದರೆ ಉಪ ಚುನಾವಣೆಯಲ್ಲಿ ಯಾಕೆ ಟಿಕೆಟ್ ಕೊಡಲಿಲ್ಲ. ಅವರು ನಮ್ಮ ಧರ್ಮಕ್ಕೆ ಅಪಮಾನ ಮಾಡುವ 'ನಮಕ್ಕರಾಮ್' ಕೆಲಸ ಮಾಡ್ತಿದ್ದಾರೆ ಎಂದು ಜೆಡಿಎಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಅವರು ಶಾಸಕ ಜಮೀರ್ ಅಹ್ಮದ್ ಖಾನ್ ಖಾನ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರಿಗೆ ನಾಚಿಕೆ ಆಗಲ್ಲವೇ?. ರಾಜ್ಯಸಭೆ ಚುನಾವಣೆಯಲ್ಲಿ ಬಿ ಎಂ ಫಾರೂಕ್ ಅವರನ್ನು ಸೋಲಿಸಿದ್ದು ಯಾರು?. ಫಾರೂಕ್ ಸೋಲಿಗೆ ಜಮೀರ್ ಅಹ್ಮದ್ ಕಾರಣ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ, ವರುಣಾ ಹಾಗೂ ಕನಕಪುರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲಿ. 3-4 ಖಾತೆ ತೆಗೆದುಕೊಂಡು ಮುಸ್ಲಿಂ ಜನತೆಗೆ ಮೋಸ ಮಾಡಿದವರು ಇವತ್ತು ಮಾತಾಡ್ತಿದ್ದಾರೆ ಎಂದು ದೂರಿದರು.
ಹುಲಿ ಹೊಟ್ಟೇಲಿ ನರಿ ಹುಟ್ಟಲ್ಲ :ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ಸರಿ ಇರಲ್ಲ. ಎಲ್ಲದ್ದಕ್ಕೂ ನಾನು ಉತ್ತರ ಕೊಡುವುದಕ್ಕೆ ರೆಡಿ. ದೇಶದಲ್ಲಿ ಜಾತ್ಯಾತೀತ, ಸೆಕ್ಯುಲರ್ ಲೀಡರ್ ಯಾರು ಅಂದರೆ ದೇವೇಗೌಡರು. ಹುಲಿಯ ಹೊಟ್ಟಿಯಲ್ಲಿ ನರಿ ಹುಟ್ಟುವುದಿಲ್ಲ. ಕುಮಾರಸ್ವಾಮಿ ಅವರು ಮುಸ್ಲಿಮರಿಗೆ ಅನೇಕ ಕೆಲಸ ಮಾಡಿದ್ದಾರೆ ಎಂದು ಜಫ್ರುಲ್ಲಾ ಅವರು ಹೇಳಿದರು.