ಬೆಂಗಳೂರು: ಹೆಚ್ಚಿನ ಲಾಭಾಂಶ ನೀಡುವುದಾಗಿ ಹುಸಿ ಭರವಸೆ ನೀಡಿ ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಎಸಗಿದ್ದ ಆರೋಪದಡಿ ಇಜಾಂಜ್ ಇಂಟರ್ ನ್ಯಾಷನಲ್ ಗ್ರೂಪ್ ಕಂಪನಿ ಪಾಲುದಾರರನ್ನು ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಬಂಧಿಸಿರುವ ಜಾರಿ ನಿರ್ದೇಶಾನಾಲಯ ಅಧಿಕಾರಿಗಳು ನ.19ರವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ಚುರುಕುಗೊಳಿಸಿದ್ದಾರೆ.
ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸಬಹುದು. ತಮ್ಮ ಕಂಪನಿಯಲ್ಲಿ ಹೆಚ್ಚು ಹಣ ಹೂಡಿದರೆ ಅಧಿಕ ಬಡ್ಡಿ ಹಣ ನೀಡಲಾಗುವುದು ಎಂದು ಜನರಿಗೆ ಆಶ್ವಾಸನೆ ನೀಡಿ 2016 ರಿಂದ ಈವರೆಗೂ ಸುಮಾರು 250 ಕೋಟಿ ರೂಪಾಯಿ ಹಣ ಪಾವತಿಸಿಕೊಂಡಿತ್ತು. ಬಳಿಕ ಅಸಲು-ಬಡ್ಡಿ ಹಣ ನೀಡದೆ ವಂಚಿಸಿತ್ತು. ಈ ಸಂಬಂಧ ವಂಚನೆಗೊಳಗಾದ ನೂರಾರು ಮಂದಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.