ಬೆಂಗಳೂರು:ನಗರ ಪೊಲೀಸರಿಗೆ ಯಾವುದೇ ಅನುಮಾನ ಬಾರದಂತೆ ಯೋಜನೆ ರೂಪಿಸಿ ಶಾಂಪೇನ್ ಬಾಟಲ್ಗಳಲ್ಲಿ ಎಂಡಿಎಂ ಕಿಸ್ಟಲ್ ಪೌಡರ್ ತುಂಬಿ ನಗರದಲ್ಲಿ ಅವ್ಯಾಹತವಾಗಿ ಮಾರಾಟ ಮಾಡುತ್ತಿದ್ದ ಐವರಿಕೋಸ್ಟ್ ದೇಶದ ಪ್ರಜೆಯನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
28 ವರ್ಷದ ದೋಸ್ಸೋ ಖಲೀಫಾ ಎಂಬಾತನನ್ನು ಬಂಧಿಸಿ 2.5 ಕೋಟಿ ರೂ ಮೌಲ್ಯದ ಎರಡೂವರೆ ಕೆ.ಜಿ. ಮೌಲ್ಯದ ಡ್ರಗ್ಸ್, ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿಕೊಂಡಿದ್ದ ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೋಟ್ಯಂತರ ಮೌಲ್ಯದ ಡ್ರಗ್ಸ್ ಸಾಗಣೆ: ಬೆಂಗಳೂರಲ್ಲಿ ಐವರಿಕೋಸ್ಟ್ ಫುಟ್ಬಾಲ್ ಆಟಗಾರ ಅರೆಸ್ಟ್ ಟೆಕ್ಕಿಗಳು, ವಿದ್ಯಾರ್ಥಿಗಳೇ ಟಾರ್ಗೆಟ್:
ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಖಲೀಫಾ ಕಳೆದ ಐದು ವರ್ಷಗಳ ಹಿಂದೆ ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದಿದ್ದ. ಡ್ರಗ್ಸ್ ದಂಧೆಕೋರರ ಸಂಪರ್ಕ ಸಾಧಿಸಿ ನಿರಂತರವಾಗಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಈತನ ವಿರುದ್ದ 2018ರಲ್ಲಿ ಬಾಗಲೂರು ಹಾಗೂ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ಟೆಕ್ಕಿಗಳು, ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಎಂಡಿಎಂಎ ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಗೋವಾದಿಂದ ಡ್ರಗ್ಸ್ ತರಿಸುತ್ತಿದ್ದ ಆರೋಪಿ:
ನಗರದಲ್ಲಿ ನಡೆಯುವ ಹೈ-ಎಂಡ್ ಪಾರ್ಟಿಗಳಿಗೆ ಪ್ರಮುಖ ಡ್ರಗ್ಸ್ ಪೆಡ್ಲರ್ಗಳಿಗೆ ಆರೋಪಿಯು ಡ್ರಗ್ಸ್ ಸಾಗಾಟ ಮಾಡುತ್ತಿದ್ದ. ಗೋವಾದ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಸಾಧಿಸಿ ಅಲ್ಲಿ ಶಾಂಪೇನ್ ಬಾಟಲ್ಗಳಲ್ಲಿ ಎಂಎಡಿಎಂ ಕ್ರಿಸ್ಟಲ್ ಪೌಡರ್ ತುಂಬಿ ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದ. ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ನಿರಂತರವಾಗಿ ಮಾದಕವಸ್ತು ಸರಬರಾಜು ಮಾಡುತ್ತಿದ್ದ. ಈತನ ಜೊತೆ ಸಂಪರ್ಕದಲ್ಲಿರುವವರ ಬಗ್ಗೆ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ತಿಳಿಸಿದ್ದಾರೆ.
ಫುಟ್ಬಾಲ್ ಆಟಗಾರನಾಗಿದ್ದ ಖಲೀಫಾ:
ಬಂಧಿತ ಆರೋಪಿ ಡೊಸ್ಸೊ ಖಲೀಫಾ ಫುಟ್ಬಾಲ್ ಆಟಗಾರನಾಗಿಯೂ ಗುರುತಿಸಿಕೊಂಡಿದ್ದ. 2015ರಲ್ಲಿ ಅರೋಪಿಯು ವೀಸಾ ಪಡೆದು ಭಾರತಕ್ಕೆ ಅಗಮಿಸಿದ್ದ. ಆರೋಪಿಯು ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಹಲವು ದಿನಗಳ ಕಾಲ ವಾಸ ಮಾಡಿದ್ದ ಎಂದು ತಿಳಿದು ಬಂದಿದೆ.
2018ರಲ್ಲಿ ಬೆಂಗಳೂರಿಗೆ ಬಂದಿದ್ದ ಖಲಿಫಾ ಡ್ರಗ್ಸ್ ಜಾಲದಲ್ಲಿ ಸಕ್ರಿಯನಾಗತೊಡಗಿದ್ದ. ಈ ಹಿಂದೆ ಜೆ.ಸಿ.ನಗರ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳಾದ ಬಿಡಿಎ ರವಿ ಹಾಗೂ ಶೋಹೆಬ್ ಬುದ್ದಿನ್ ಎಂಬುವರಿಗೆ ಆರೋಪಿಯು ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ. ಡ್ರಗ್ಸ್ ಪಾರ್ಟಿಯಲ್ಲಿ ಶ್ರೀಮಂತ ಉದ್ಯಮಿ, ರಿಯಲ್ ಎಸ್ಟೇಟ್ ಉದ್ಯಮಿಗಳ ಮಕ್ಕಳು ಭಾಗಿಯಾಗುತ್ತಿದ್ದರು ಎನ್ನಲಾಗುತ್ತಿದೆ.
ಇದನ್ನೂ ಓದಿ:ದಾರದಲ್ಲಿ ಮೂಡಿಬಂದ ವಿಷ್ಣುವರ್ಧನ್ ಕಲಾಕೃತಿ.. ಸ್ಟ್ರಿಂಗ್ ಆರ್ಟ್ ಮೂಲಕ ಐಶ್ವರ್ಯಾ ಕೈಚಳಕ