ಬೆಂಗಳೂರು: ನಗರದ ವಿವಿಪುರಂನಲ್ಲಿ ಮಂಗಳವಾರ ನಡೆಯಲಿರುವ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎನ್ನುವ ಹಿಂದೂಪರ ಸಂಘಟನೆಗಳ ಮನವಿಗೆ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾತ್ರೆಯಲ್ಲಿ ಇದೇ ವಿಚಾರ ಇರಿಸಿಕೊಂಡು ಗದ್ದಲಕ್ಕೆ ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಜಾತ್ರೆಯ ಮುನ್ನ ದಿನವಾದ ಇಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ದೇವರ ದರ್ಶನ ಮಾಡಿ ಬಳಿಕ ಜಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳವಾರ ಸುಬ್ರಹ್ಮಣ್ಯ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ವ್ಯಾಪಾರಿಗಳಿಗೆ ಅವಕಾಶ ನೀಡುವ ವಿಚಾರದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನೇ ಮುಂದುವರೆಸಲಾಗುತ್ತದೆ. ಹಿಂದೂಯೇತರ ವರ್ತಕರಿಗೆ ಅವಕಾಶ ನೀಡಬಾರದು ಎನ್ನುವ ಆಗ್ರಹ ಸರಿಯಲ್ಲ. ಇದೇ ವಿಷಯ ಇರಿಸಿಕೊಂಡು ಜಾತ್ರೆಯಲ್ಲಿ ಗದ್ದಲವೆಬ್ಬಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದೂಪರ ಸಂಘಟನೆಗಳಿಗೆ ಎಚ್ಚರಿಕೆ ನೀಡಿದರು.
ಎಲ್ಲಾ ಧರ್ಮದ ವರ್ತಕರಿಗೆ ಅವಕಾಶ ಕೊಡಬೇಕು : ನಾವು ಚುನಾಯಿತ ಪ್ರತಿನಿಧಿಗಳು, ಎಲ್ಲರ ಮತ ಪಡೆದೇ ಆಯ್ಕೆಯಾಗಿದ್ದೇವೆ. ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕಾರ ಮಾಡಿ ಶಾಸಕ ಸ್ಥಾನ ಅಲಂಕರಿಸಿದ್ದೇವೆ. ಈ ಸ್ಥಾನದಲ್ಲಿದ್ದಾಗ ಜಾತಿ, ಧರ್ಮದ ಬೇಧಭಾವ ಮಾಡಲು ಸಾಧ್ಯವಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ. ಅದರಂತೆ ಹಿಂದಿನಿಂದ ಬಂದ ಪದ್ಧತಿಯಂತೆ ಜಾತ್ರೆಯಲ್ಲಿ ಎಲ್ಲ ಧರ್ಮದವರಿಗೂ ಅವಕಾಶ ಕೊಡಲೇಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.