ಬೆಂಗಳೂರು:ಉಪಚುನಾವಣೆ ಬಹಿರಂಗ ಪ್ರಚಾರ ಅಂತ್ಯವಾಗಲು ಮೂರುದಿನ ಬಾಕಿ ಇರುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಶಿವಾಜಿನಗರದಲ್ಲಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.
ಎರಡು ವಾರಗಳಿಂದ ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದರೂ ಕೂಡ ಶಿವಾಜಿನಗರ ಕಡೆ ಮುಖಮಾಡದ ಸಿದ್ದರಾಮಯ್ಯ, ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಹಾಗೂ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಪರಇಂದುಪ್ರಚಾರ ನಡೆಸಲಿದ್ದಾರೆ. ಈ ಸಂದರ್ಭ ಇವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಲಿದ್ದಾರಂತೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ ಕೆಆರ್‌ಪುರಂ, ಸಂಜೆ ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಕೆಆರ್‌ಪುರದಲ್ಲಿ ಬೆಳಗ್ಗೆ 11 ಗಂಟೆಗೆ ಹೊರಮಾವು, 12ಕ್ಕೆ ಕಲ್ಕೆರೆ, 1ಕ್ಕೆ ಚನ್ನಸಂದ್ರ, 2ಕ್ಕೆ ರಾಮಮೂರ್ತಿನಗರ, 3 ಗಂಟೆಗೆ ಅಂಬೇಡ್ಕರ್‌ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ. ಇದಾದ ಬಳಿಕ ಸಂಜೆ 5 ಗಂಟೆ ನಂತರ ಶಿವಾಜಿನಗರದಲ್ಲಿ ಪ್ರಚಾರಕಾರ್ಯ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.
ಪಕ್ಷದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವೇಳೆ ರಿಜ್ವಾನ್ ಅರ್ಷದ್ ಜೊತೆ ಹಲವು ರಾಜ್ಯ ನಾಯಕರು ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ರಾಜ್ಯಸಭೆ ಸದಸ್ಯ ಬಿ ಕೆ ಹರಿಪ್ರಸಾದ್ ಸೇರಿ ಯಾವೊಬ್ಬ ನಾಯಕರು ಇವರ ಜೊತೆ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಆದರೆ, ಮೊನ್ನೆ ಮಾಜಿ ಸಚಿವ ಡಿ ಕೆ ಶಿವಕುಮಾರ್ ಮತ್ತು ಒಂದೆರಡು ಕಡೆ ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಇತರೆ ನಾಯಕರು ಕಾಣಿಸಿಕೊಂಡಿದ್ದು ಬಿಟ್ಟರೆ ರಾಜ್ಯ ನಾಯಕರು ಯಾರೂ ಕಾಣಿಸಿಕೊಂಡಿಲ್ಲ.
ಐಎಂಎ ಹಗರಣದಲ್ಲಿ ರಿಜ್ವಾನ್ ಹೆಸರು ಕೂಡ ಕೇಳಿ ಬಂದಿರುವ ಹಿನ್ನೆಲೆ ಅವರ ಜೊತೆ ವೇದಿಕೆ ಅಥವಾ ಪ್ರಚಾರ ಕಾರ್ಯಕ್ರಮವನ್ನು ಹಂಚಿಕೊಳ್ಳಲು ಹಲವು ನಾಯಕರು ಹಿಂಜರಿಯುತ್ತಿದ್ದಾರೆ ಎನ್ನಲಾಗುತ್ತಿದೆ.