ಕರ್ನಾಟಕ

karnataka

ETV Bharat / state

3 ರಾಜ್ಯಗಳಲ್ಲಿ ಸರ್ಕಾರಿ ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ಐಟಿ ದಾಳಿ: ₹102 ಕೋಟಿ ಮೌಲ್ಯದ ಹಣ, ಚಿನ್ನಾಭರಣ ವಶಕ್ಕೆ

ಮೂರು ರಾಜ್ಯಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 102 ಕೋಟಿ ರೂಪಾಯಿ ಮೌಲ್ಯದ ಹಣ, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಐಟಿ ದಾಳಿ
ಐಟಿ ದಾಳಿ

By ETV Bharat Karnataka Team

Published : Oct 16, 2023, 4:50 PM IST

Updated : Oct 16, 2023, 5:41 PM IST

ಬೆಂಗಳೂರು : ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸರ್ಕಾರಿ ಗುತ್ತಿಗೆದಾರರು ಹಾಗೂ ರಿಯಲ್‌ ಎಸ್ಟೇಟ್ ಉದ್ಯಮಿಗಳ ಮೇಲೆ‌ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ನೂರಾರು ಕೋಟಿ ರೂಪಾಯಿ ತೆರಿಗೆ ವಂಚನೆ ಪತ್ತೆ ಮಾಡಿದ್ದಾರೆ.

ಆದಾಯ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಗುತ್ತಿಗೆದಾರರು, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿದಂತೆ ಅವರ ಆಪ್ತರ ಮನೆ, ಕಚೇರಿಗಳು ಸೇರಿದಂತೆ ಸುಮಾರು 55 ಕಡೆಗಳಲ್ಲಿ ಐಟಿ ಶೋಧ ನಡೆಸಿದೆ.‌‌‌ ಈ ಸಂದರ್ಭದಲ್ಲಿ ನಡೆದ ಪರಿಶೀಲನೆಯಲ್ಲಿ 94 ಕೋಟಿ ರೂ.ನಗದು, 8 ಕೋಟಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣ, ದುಬಾರಿ ಬೆಲೆಯ 30 ವಾಚ್​ಗಳು ದೊರೆತಿವೆ. ಸೂಕ್ತ ದಾಖಲಾತಿ ಇಲ್ಲದ ನೀಡದ ಕಾರಣ ನಗದು, ಚಿನ್ನಾಭರಣ ಜಪ್ತಿ ಮಾಡಲಾಗಿದೆ‌ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಐಟಿ ಇಲಾಖೆ ತಿಳಿಸಿದೆ.

ಅಕ್ಟೋಬರ್ 12ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರ ಅಂಬಿಕಾಪತಿ ಪುತ್ರ ಹಾಗೂ ಇತರರ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಸುಮಾರು 42 ಕೋಟಿ ರೂಪಾಯಿ ಹಣ ದೊರೆತಿತ್ತು.

ಬಿಲ್ಡರ್ ಅಪಾರ್ಟ್​ಮೆಂಟ್​ನಲ್ಲಿ ₹40 ಕೋಟಿ ಹಣ ಪತ್ತೆ: ನಗರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ಮುಂದುವರೆದಿದ್ದು, ಕಂತೆ ಕಂತೆ ನಗದು ಹಣ ಪತ್ತೆಯಾಗುತ್ತಲೇ ಇದೆ. ಭಾನುವಾರ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿರುವ ಬಿಲ್ಡರ್‌ವೊಬ್ಬರ ಅಪಾರ್ಟ್‌ಮೆಂಟ್ ಮೇಲೆ ನಡೆಸಿದ ದಾಳಿ ವೇಳೆ 40 ಕೋಟಿ ರೂ.ಗಿಂತ ಅಧಿಕ ನಗದು ಸಿಕ್ಕಿದೆ ಎಂದು ಐಟಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಗುತ್ತಿಗೆದಾರ ಸಂತೋಷ ಕೃಷ್ಣಪ್ಪ ಅವರ ಅಪಾರ್ಟ್‌ಮೆಂಟ್ ಮೇಲೆ ನಡೆದ ದಾಳಿಯಲ್ಲಿ ಇಷ್ಟೊಂದು ಹಣ ಪತ್ತೆಯಾಗಿತ್ತು. ಈ ಹಣ ಪತ್ತೆಯಾಗುತ್ತಿದ್ದಂತೆ 6ಕ್ಕೂ ಹೆಚ್ಚು ಕಾರುಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದರು. ವಿಚಾರಣೆಯಲ್ಲಿ ಸಂತೋಷ್, ಕಾಂಗ್ರೆಸ್ ಮಾಜಿ ಎಂಎಲ್‌ಸಿಯೊಬ್ಬರ ಹೆಸರು ಪ್ರಸ್ತಾಪಿಸಿದ್ದರು. ಹೀಗಾಗಿ ಐಟಿ ಅಧಿಕಾರಿಗಳು ಹಣದ ಮೂಲ ಕಂಡು ಹಿಡಿಯಲು ಮಾಜಿ ಎಂಎಲ್‌ಸಿ ಸಂಬಂಧಿಕರನ್ನು ಫ್ಲ್ಯಾಟ್‌ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದರು.

32 ಬಾಕ್ಸ್‌ಗಳಲ್ಲಿ ₹40 ಕೋಟಿಗಿಂತಲೂ ಅಧಿಕ ಹಣ:ಗುತ್ತಿಗೆದಾರ ಸಂತೋಷ ನಿವಾಸದಲ್ಲಿ ಶೋಧ ನಡೆಸಿದ ಐಟಿ ಅಧಿಕಾರಿಗಳು ಇಡೀ ದಿನ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ ಫ್ಲ್ಯಾಟ್‌ನಲ್ಲಿ ದಾಖಲೆಗಳನ್ನು ಜಾಲಾಡಿದ್ದಾರೆ. ಈ ವೇಳೆ 32 ಬಾಕ್ಸ್‌ಗಳಲ್ಲಿ 40 ಕೋಟಿ ರೂ. ಗಿಂತಲೂ ಅಧಿಕ ಹಣ ಸಿಕ್ಕಿತ್ತು. ಸಂಜೆ 7 ಗಂಟೆ ಸುಮಾರಿಗೆ ಅಧಿಕಾರಿಗಳು ಪತ್ತೆಯಾಗಿರುವ ಹಣದ ಕುರಿತು ಮತ್ತಷ್ಟು ಮಾಹಿತಿ ನೀಡುವಂತೆ ಸಂತೋಷ್‌ಗೆ ನೊಟೀಸ್ ನೀಡಿದ್ದರು. ಇದೇ ಸಂದರ್ಭ ಹಲವು ದಾಖಲೆಗಳು, 3 ಟ್ರಂಕ್, 3 ಬ್ಯಾಗ್, 1 ಸೂಟ್‌ಕೇಸ್‌ಗಳಲ್ಲಿ ಹಣವನ್ನು ವಶಕ್ಕೆ ಪಡೆದು ಕೊಂಡೊಯ್ದಿದ್ದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೆ ಐಟಿಯಿಂದ ಭರ್ಜರಿ ಬೇಟೆ.. ಬಿಲ್ಡರ್ ಅಪಾರ್ಟ್​ಮೆಂಟ್​ನಲ್ಲಿ 40 ಕೋಟಿ ಹಣ ಪತ್ತೆ

Last Updated : Oct 16, 2023, 5:41 PM IST

ABOUT THE AUTHOR

...view details