ಬೆಂಗಳೂರು:ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳ ಕಾರಣ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪರಮೇಶ್ವರ್ ಪಿಎ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಅವರು ಮಾಧ್ಯಮದವರ ಜತೆ ಮಾತನಾಡಿದ್ದಾರೆ. ಐಟಿ ಅಧಿಕಾರಿಗಳ ಕಿರುಕುಳ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೇಳಿಕೊಂಡಿದ್ದಾರೆ. ಹೀಗಾಗಿ ಐಟಿ ಕಿರುಕುಳದಿಂದ ರಮೇಶ್ ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿದರು.
ಅವರ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ. ರಾಜಕೀಯ ದ್ವೇಷದಿಂದ ಐಟಿ ರೇಡ್ ಸರಿಯಲ್ಲ. ಬಿಜೆಪಿಯಲ್ಲಿ ಶಿಕ್ಷಣ ಸಂಸ್ಥೆ ನಡೆಸುವವರು ಇಲ್ಲವಾ, ಕಾಂಗ್ರೆಸ್ ನಾಯಕರ ಮೇಲೆಯೇ ಏಕೆ ಐಟಿ ದಾಳಿ ನಡೆಯುತ್ತದೆ. ಎಲ್ಲರ ಮೇಲೂ ಐಟಿ ದಾಳಿ ನಡೆಯಲಿ. ಅದಕ್ಕೆ ನನ್ನ ಆಕ್ಷೇಪ ಇಲ್ಲ. ಆದರೆ ಒಂದು ಪಕ್ಷದ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡಬಾರದು ಎಂದು ಕಿಡಿಕಾರಿದರು.
ಐಟಿ ಅಧಿಕಾರಿಗಳ ಪ್ರಚೋದನೆ ಕಾರಣ:
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಮೇಶ್ ಕೆಪಿಸಿಸಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಅವರ ಜೊತೆ ಮಾತನಾಡಿದ್ದೆ. ಪರಮೇಶ್ವರ್ಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಅವರ ಫೋನ್ ಮೂಲಕ ಕರೆ ಮಾಡಿದ್ದೆ. ಈ ಆತ್ಮಹತ್ಯೆ ಸುದ್ದಿ ಕೇಳಿ ನೋವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರಮೇಶ್ ಓರ್ವ ಜವಾಬ್ದಾರಿ, ಪ್ರಮಾಣಿಕ, ನಿಷ್ಠಾವಂತ ಕೆಲಸಗಾರ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಇದರ ಹಿಂದೆ ಐಟಿ ಅಧಿಕಾರಿಗಳ ಕಿರುಕುಳ ಇದೆ. ಐಟಿ ಅಧಿಕಾರಿಗಳು ಭಯದ ವಾತಾವರಣ ಸೃಷ್ಟಿಸಿದ್ದಾರೆ. ಈ ಹಿಂದೆ ಉದ್ಯಮಿ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತು. ಅದೇ ರೀತಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ತನಿಖೆಯಾಗಬೇಕು. ಈ ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ ಪೊಲೀಸರು ಸ್ಪಷ್ಟವಾಗಿ ತನಿಖೆ ಮಾಡಬೇಕು. ಇಡಿ, ಐಟಿ, ಪೊಲೀಸ್ ಇಲಾಖೆ, ಸಿಬಿಐ ಮೇಲೆ ವಿಶ್ವಾಸ ಇಲ್ಲ. ಯಾವ ಕಾರಣಕ್ಕೆ ಆಗಿದೆ ಎಂದು ನಿಷ್ಪಕ್ಷಪಾತ ತನಿಖೆ ಆಗಬೇಕು. ಅಧಿಕಾರಿಗಳ ಪ್ರಚೋದನೆಯಿಂದ ಆತ್ಮಹತ್ಯೆ ಆಗಿದೆಯಾ ಎಂಬ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಐಟಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ:
ಇದೇ ವೇಳೆ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ರಮೇಶ್ ಆತ್ಮಹತ್ಯೆ ಅತ್ಯಂತ ನೋವಿನ ಸುದ್ದಿ. ದೇಶದ ಇತಿಹಾಸದಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆದಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರದ ಅಣತಿಯಂತೆ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಐಟಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿ ಅಧಿಕಾರಿಗಳು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿ ಐಟಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪರಮೇಶ್ವರ್ ಪಿಎ ಸಾವಿಗೆ ಟ್ವೀಟ್ ಮೂಲಕ ಕಿಡಿಕಾರಿದ ಕಾಂಗ್ರೆಸ್:
ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಸಾವಿಗೆ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ. ಐಟಿ ಇಲಾಖೆಯ ಅಮಾನವೀಯತೆಗೆ ಮತ್ತೊಂದು ಬಲಿಯಾಗಿದೆ. ಈ ಸಾವು ನ್ಯಾಯವೇ ಎಂದು ರಾಜ್ಯದ ಜನ ಪ್ರಶ್ನಿಸುತ್ತಿದ್ದಾರೆ. ರಮೇಶ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಅವರ ಕುಟುಂಬದ ದುಃಖದಲ್ಲಿ ನಾವಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ವತಿಯಿಂದ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಲಾಗಿದೆ.