ಕರ್ನಾಟಕ

karnataka

ETV Bharat / state

ಕಾವೇರಿ ನೀರು ವಿಚಾರವಾಗಿ ನಾಳೆ ಮಂಡ್ಯ ಬಂದ್ ಕುರಿತು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ

ಕೆಆರ್​ಎಸ್, ಮಂಡ್ಯ ಜಿಲ್ಲೆ ಸೇರಿ ಪ್ರತಿಭಟನೆ ನಡೆಯುವ ಕಡೆ ಬಂದೋಬಸ್ತ್ ಮಾಡಿಕೊಂಡಿದ್ದೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.

Home Minister Dr G Parameshwar
ಗೃಹ ಸಚಿವ ಡಾ ಜಿ ಪರಮೇಶ್ವರ್​

By ETV Bharat Karnataka Team

Published : Sep 22, 2023, 2:55 PM IST

ಬೆಂಗಳೂರು: ಕಾವೇರಿ ನೀರು ವಿಚಾರವಾಗಿ ನಾಳೆ ಮಂಡ್ಯ ಬಂದ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪ್ರತಿಭಟನೆ ಮಾಡುವುದು ಅವರ ಹಕ್ಕು. ಆದರೆ, ಯಾವುದೇ ರೀತಿಯಲ್ಲಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವುದಾಗಲಿ, ಜನ ಸಾಮಾನ್ಯರಿಗೆ ತೊಂದರೆ ಮಾಡುವುದಾಗಲಿ, ಕಾನೂನು ಬಾಹಿರ ಚಟುವಟಿಕೆಗಳು ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿಭಟನೆ ಮಾಡುವುದರ ಬಗ್ಗೆ ನಮ್ಮದು ತಕರಾರು ಏನು ಇಲ್ಲ. ನೀರು ಬಿಡಬಾರದು ರಾಜ್ಯದ ಹಿತಾಸಕ್ತಿ ರಕ್ಷಣೆ ಮಾಡಲು ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಬಹುದು. ಆದರೆ, ಯಾವುದೇ ಹಾನಿ ಮಾಡಬಾರದು. ಒಂದು ವೇಳೆ ಆ ರೀತಿಯ ಘಟನೆಗಳು ಆದ ಸಂದರ್ಭದಲ್ಲಿ ತಡೆಯಲು ಪೊಲೀಸ್ ಸಿದ್ಧರಾಗಿದ್ದಾರೆ.‌ ಈಗಾಗಲೇ ನಾವು ಕೆಆರ್​ಎಸ್, ಮಂಡ್ಯ ಜಿಲ್ಲೆ ಸೇರಿ ಪ್ರತಿಭಟನೆ ನಡೆಯುವ ಕಡೆ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಕಾನೂನು ಬಾಹಿರ ಚಟುವಟಿಕೆಗಳು ಮಾಡಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಹಾಗಾದಲ್ಲಿ ಕಾನೂನು ಪ್ರಕಾರ ಎಚ್ಚರಿಕೆ ವಹಿಸುತ್ತೇವೆ ಎಂದು ಹೇಳಿದರು.

ಮಂಡ್ಯ ಬಂದ್​ಗೆ ಬಿಜೆಪಿ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿಭಟನೆ ಮಾಡಲು ನಮ್ಮ ತಕರಾರು ಇಲ್ಲ. ಆದರೆ ರಾಜಕೀಯ ಮಾಡಬಾರದೆಂದು ಮನವಿ ಮಾಡುತ್ತೇನೆ. ಬಿಜೆಪಿಯವರು ಸಹ ವಿವಾದದಲ್ಲಿ ಭಾಗಿಗಳೇ.‌ ಆದ್ದರಿಂದ ಅವರಿಗೂ ಜವಾಬ್ದಾರಿ ಇದೆ. ಇದರಲ್ಲಿ ರಾಜಕೀಯ ಮಾಡುವುದರಲ್ಲಿ ಅರ್ಥವಿಲ್ಲ. ಬಿಜೆಪಿಯವರು ರಾಜಕೀಯ ಬೇರೆ ರೀತಿಯಲ್ಲಿ ಮಾಡಲಿ ಎಂದರು.

ನಾವು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ. ಎಲ್ಲ ರೀತಿಯಲ್ಲಿಯೂ ಕ್ರಮ ತೆಗೆದುಕೊಂಡಿದ್ದೇವೆ. ಸರ್ವಪಕ್ಷ ಸಭೆಯಲ್ಲಿ ಎಲ್ಲ ವಿವರಣೆ ನೀಡಿದ್ದೇವೆ. ನೀರು ಬಿಡುವ ಮೊದಲು ಸರ್ವಪಕ್ಷ ಸಭೆ ಕರೆಯಲಾಗಿತ್ತು. ಅಮೇಲೆ ಎರಡನೇ ಸರ್ವಪಕ್ಷ ಸಭೆ ಕರೆದಿದ್ದು, ಎಲ್ಲ ಒಪ್ಪಿಕೊಂಡು ನಿಮ್ಮ ಜೊತೆಗೆ ಇರುತ್ತೇವೆ. ಏನೇ ನಿರ್ಧಾರ ತೆಗೆದುಕೊಂಡರೂ ಸರ್ಕಾರದ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ. ಅದನ್ನೇ ನಾವು ನಿರೀಕ್ಷೆ ಮಾಡುತ್ತೇವೆ ಎಂದು ಹೇಳಿದರು.

ಕಾವೇರಿ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಆಗುವುದೇ ಎಂಬ ಪ್ರಶ್ನೆಗೆ, ಅದೆಲ್ಲ ಚರ್ಚೆ ಆಗಬಹುದು ಎಂದುಕೊಂಡಿದ್ದೇನೆ ಎಂದರು. ಮಾಜಿ ಸಿಎಂ ಬಂಗಾರಪ್ಪ ಅವರು ಸುಗ್ರೀವಾಜ್ಜೆ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ನೋಡೋಣ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ದೆಹಲಿಗೆ ಹೋಗಿ ಬಂದಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಮಾಹಿತಿ ನೀಡುತ್ತಾರೆ ಎಂದು ಹೇಳಿದರು.

ಇವತ್ತು ಬೆಳಗ್ಗೆ ಪರಿಶೀಲನೆ ಮಾಡಿದ್ದು, ಕೆಆರ್​ಎಸ್​ನಲ್ಲಿ ಈಗ 20.56 ಟಿಎಂಸಿ ನೀರು ಇದೆ. ಒಳ ಹರಿವು 5 ಸಾವಿರ ಕ್ಯೂಸೆಕ್ ಇದೆ. ನೀರಿನ ಮಟ್ಟ ಹೆಚ್ಚುತ್ತಿಲ್ಲ. ನಮ್ಮಲ್ಲಿ ನೀರಿಲ್ಲ ಅಂತ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಸಹ ಸುಪ್ರೀಂ ಕೋರ್ಟ್ ಪ್ರಾಧಿಕಾರದ ಆದೇಶ ಪಾಲಿಸಿ ಎಂದು ಹೇಳಿದೆ. ನೀರು ಬಿಟ್ಟು ಬನ್ನಿ ಅಂತ ಹೇಳಿದ್ದಾರೆ. ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಬಹುದು ಎಂದರು.

ಇದನ್ನೂ ಓದಿ :ರಾಜ್ಯದಲ್ಲಿ 'ಕಾವೇರಿ'ದ ಜಲ ವಿವಾದ: ಬೆಂಗಳೂರಿನಲ್ಲಿ ತಮಿಳಿಗರು ವಾಸಿಸುವ ಪ್ರದೇಶಗಳಿಗೆ ಪೊಲೀಸ್​ ಭದ್ರತೆ

ABOUT THE AUTHOR

...view details