ಬೆಂಗಳೂರು :ನ್ಯಾಯಾಂಗಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕಿರುವುದು ಸರ್ಕಾರದ ಕರ್ತವ್ಯವೇ ಹೊರತು ಕರುಣೆಯಿಂದಲ್ಲ. ಹೀಗಾಗಿ, ನ್ಯಾಯಾಲಯಗಳಿಗೆ ಅಗತ್ಯ ಪ್ರಮಾಣದಲ್ಲಿ ಸರ್ಕಾರಿ ಅಭಿಯೋಜಕರನ್ನು ನೇಮಿಸಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.
ರಾಜ್ಯದ ವಿಚಾರಣಾ ನ್ಯಾಯಾಲಯಗಳಲ್ಲಿ ಸರ್ಕಾರಿ ಅಭಿಯೋಜಕರ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಸಹಾಯಕ ಸರ್ಕಾರಿ ಅಭಿಯೋಜಕರ(ಎಪಿಪಿ) ನೇಮಕಾತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳನ್ನು ಕುರಿತು ಹೆಚ್ಚಿನ ಮಾಹಿತಿ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಪೀಠ ವಿಚಾರಣೆಯನ್ನು ಏ.5ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಎಪಿಪಿಗಳ ನೇಮಕಾತಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ನ್ಯಾಯಾಂಗದ ಕಾರ್ಯ ನಿರ್ವಹಣೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವುದು ಸರ್ಕಾರದ ಸಾಂವಿಧಾನಿಕ ಬಾಧ್ಯತೆ. ಅವುಗಳನ್ನು ಸರ್ಕಾರ ಕರುಣೆಯಿಂದ ಕೊಡಬೇಕಿಲ್ಲ. ಸುಪ್ರೀಂಕೋರ್ಟ್ ಕೂಡ ಇದನ್ನೇ ಸ್ಪಷ್ಟವಾಗಿ ಹೇಳಿದೆ.
ಅಭಿಯೋಜನೆ ಇಲಾಖೆಯಲ್ಲಿ ಅಗತ್ಯ ಸಂಖ್ಯೆಯ ಪಿಪಿ, ಎಪಿಪಿಗಳಿಲ್ಲದೇ ನ್ಯಾಯಾದಾನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಮುಖ್ಯವಾಗಿ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಅನಗತ್ಯ ಮುಂದಕ್ಕೆ ಹೋಗುತ್ತಿವೆ.
ಇದರಿಂದಾಗಿ ವಿಚಾರಣಾ ಕೈದಿಗಳ ನ್ಯಾಯಾಂಗ ಬಂಧನದ ಅವಧಿಯೂ ಹೆಚ್ಚುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಖಾಲಿ ಇರುವ ಸರ್ಕಾರಿ ಅಭಿಯೋಜಕರ ಹುದ್ದೆಗಳನ್ನು ತ್ವರಿತ ಭರ್ತಿ ಮಾಡಬೇಕು. ಆರ್ಥಿಕ ಕಾರಣಗಳನ್ನು ಮುಂದಿಟ್ಟು ವಾದಿಸುವುದು ಸರಿಯಲ್ಲ ಎಂದಿತು.
ಪ್ರಕರಣದ ಹಿನ್ನೆಲೆ:ರಾಜ್ಯದ ವಿಚಾರಣಾ ನ್ಯಾಯಾಲಯಗಳಲ್ಲಿ ಸರ್ಕಾರಿ ಅಭಿಯೋಜಕರ ಕೊರತೆ ತೀವ್ರವಾಗಿದ್ದು, ಓರ್ವ ಪಿಪಿ ನಾಲ್ಕೈದು ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲ ಬಾರಿ ಪಿಪಿಗಳ ಲಭ್ಯತೆ ಇಲ್ಲದಿರುವುದರಿಂದಾಗಿ ನ್ಯಾಯಾಲಯಗಳು ಪ್ರಕರಣಗಳನ್ನು ಮುಂದೂಡುತ್ತಿವೆ.
ಇದು ನ್ಯಾಯಾಂಗದ ಕಾರ್ಯದಕ್ಷತೆ ಮೇಲೆ ಪರಿಣಾಮ ಬೀರುತ್ತಿದೆ. ಸಂವಿಧಾನದ ವಿಧಿ 21ರ ಪ್ರಕಾರ ಪ್ರತಿ ಆರೋಪಿಗೂ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳುವ ಹಕ್ಕಿದೆ. ಆದರೆ, ಪ್ರಾಸಿಕ್ಯೂಟರ್‌ಗಳ ಕೊರತೆಯಿಂದಾಗಿ ವಿಚಾರಣೆಯೂ ವಿಳಂಬವಾಗಿ ಆರೋಪಿಯ ಹಕ್ಕು ಉಲ್ಲಂಘನೆಯಾಗುತ್ತಿದೆ.
ಓದಿ:ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ: ಬಿಜೆಪಿ ಟ್ವೀಟ್
ಅಭಿಯೋಜನೆ ಇಲಾಖೆಗೆ ಮಂಜೂರಾಗಿರುವ ಪ್ರಾಸಿಕ್ಯೂಟರ್ ಹುದ್ದೆಗಳಲ್ಲಿ ಶೇ 40 ರಷ್ಟು ಹುದ್ದೆಗಳು ಖಾಲಿ ಇವೆ. ಸಿಆರ್ಪಿಸಿ ಸೆಕ್ಷನ್ 24 ಹಾಗೂ 25ರ ಪ್ರಕಾರ ಸರ್ಕಾರ ಅಭಿಯೋಜನೆ ಇಲಾಖೆಗೆ ಅಗತ್ಯ ಸಂಖ್ಯೆಯಲ್ಲಿ ಪಿಪಿಗಳನ್ನು ನೇಮಿಸಬೇಕಿದೆ. ಆದರೆ, 187 ಪಿಪಿ ಹುದ್ದೆಗಳ ಪೈಕಿ 70 ಹುದ್ದೆಗಳು ಖಾಲಿ ಇವೆ.
411 ಎಪಿಪಿ ಹುದ್ದೆಗಳ ಪೈಕಿ 204 ಹುದ್ದೆ ಖಾಲಿ ಇವೆ. ಅಂತೆಯೇ 123 ಸೀನಿಯರ್ ಎಪಿಪಿ ಹುದ್ದೆಗಳಲ್ಲಿ 18 ಹುದ್ದೆಗಳ ಖಾಲಿ ಇವೆ. ಅಭಿಯೋಜಕರ ಕೊರತೆಯಿಂದಾಗಿ ರಾಜ್ಯದ ವಿಚಾರಣಾ ನ್ಯಾಯಾಲಯಗಳಲ್ಲಿ 8.10,730 ಪ್ರಕರಣಗಳು ಬಾಕಿ ಉಳಿದಿವೆ. ಇವುಗಳಲ್ಲಿ 61,867 ಪ್ರಕರಣಗಳು 5 ವರ್ಷಗಳಷ್ಟು ಹಳೆಯವಾದರೆ, 10,650 ಪ್ರಕರಣಗಳು 10 ವರ್ಷಗಳಿಂದ ಬಾಕಿ ಉಳಿದಿವೆ.