ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಜತೆ ಕೈಜೋಡಿಸಿದ 17 ಮಂದಿ ತಮ್ಮಿಂದಲೇ ಸರ್ಕಾರ ರಚನೆಯಾಗಿದೆ ಎಂದು ಹೇಳಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಮಾಜಿ ಸಚಿವ ಹೆಚ್. ಸಿ. ಮಹದೇವಪ್ಪ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಒಂದು ಬಾರಿಯೂ ಬಹುಮತ ಪಡೆಯದೇ ಬರೀ ಅಕ್ರಮ ಮತ್ತು ವಾಮಮಾರ್ಗದ ಮೂಲಕ ಅಧಿಕಾರ ಪಡೆದ ರಾಜ್ಯ ಬಿಜೆಪಿ ಪಕ್ಷದ ದುರಾಡಳಿತದಲ್ಲಿ ಜನ ಸಾಮಾನ್ಯರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಸ್ವತಃ ಜನರೇ ಹೇಳುತ್ತಿದ್ದಾರೆ ಮತ್ತು ಅನುಭವಿಸುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸರ್ಕಾರದ ನಡುವೆ ಸಾಮರಸ್ಯ ಮತ್ತು ಹೊಂದಾಣಿಕೆ ಇಲ್ಲದೇ ರಾಜಕೀಯ ವ್ಯವಸ್ಥೆಯೇ ಕೆಳ ಮಟ್ಟಕ್ಕೆ ಹೊರಟು ಹೋಗಿದೆ. ಸದಾ ವಾಮ ಮಾರ್ಗದಲ್ಲಿ ಅಧಿಕಾರ ನಡೆಸುತ್ತಿರುವ ಇವರಿಗೆ ಯಾವಾಗಲೂ ಕೂಡಾ ಮಾನಸಿಕ ಸ್ಥೈರ್ಯವಿಲ್ಲ ಎಂದಿದ್ದಾರೆ.