ಬೆಂಗಳೂರು:''ಇತ್ತೀಚಿನ ದಿನಗಳಲ್ಲಿ ಕೆಲವು ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದು ನಮ್ಮ ವೈಫಲ್ಯವಾಗಿದೆ. ಸೋಲಿನ ನಂತರ ಪಕ್ಷ ಕಟ್ಟುವಲ್ಲಿ ನಾವು ವಿಫಲವಾಗಿದ್ದೇವೆ. ಅದರಿಂದಾಗಿಯೇ ನಾಯಕರು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ'' ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿ.ವಿ.ಟವರ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ''ಕಾಂಗ್ರೆಸ್ಗೆ ಕೆಲವರು ವಲಸೆ ಹೋಗುತ್ತಿದ್ದಾರೆ. ನಮ್ಮವರು ಅನೇಕರು ಬಿಜೆಪಿ ಬಿಟ್ಟು ಹೋಗುತ್ತಿರುವುದು ನಿಜ, ಅವರನ್ನು ಮನವರಿಕೆ ಮಾಡಿ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ. ವಿಧಾನಸಭೆ ಚುನಾವಣೆ ಸೋಲಿನ ನಂತರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಪಕ್ಷ ಕಟ್ಟಿವಲ್ಲಿ ವಿಫಲವಾಗಿದ್ದೇವೆ'' ಎಂದರು.
ಎನ್ಇಪಿ ರದ್ದುಪಡಿಸಿ, ಎಸ್ಇಪಿ ಜಾರಿ ಅಪಾಯಕರ:''ರಾಜ್ಯ ಸರ್ಕಾರ ಎಸ್‌ಇಪಿ ತರುವ ನಿರ್ಧಾರ ರಾಜ್ಯ ಶಿಕ್ಷಣ ವಲಯಕ್ಕೆ ಅಪಾಯಕಾರಿ. ಎಸ್‌ಇಪಿ ಶಿಕ್ಷಣ ಪದ್ದತಿಗೆ ಆಯೋಗ ರಚನೆ ಸರಿಯಲ್ಲ. ಎಲ್ಲ ಆಯಾಮಗಳಲ್ಲೂ ಪರಿಶೀಲಿಸಿ ಅಧ್ಯಯನ ನಡೆಸಿ ರಾಷ್ಟ್ರೀಯ ಶಿಕ್ಷಣ ನೀತಿ ತರಲಾಗಿದೆ. ಅದರಲ್ಲಿ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ಕೊಡಬೇಕು ಅನ್ನೋದೂ ಇದೆ. ಎನ್‌ಇಪಿಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ಕೊಡಲಾಗಿದೆ. ಹಾಗಾಗಿ ಎನ್ಇಪಿ ರದ್ದು ಮಾಡಿ ಎಸ್‌ಇಪಿ ತರುತ್ತಿರುವುದು ಮಾರಕ ನಡೆ. ಅವರಿಗೆ ಬೇಕಾದ ಹಾಗೆ ತಜ್ಞರ ವರದಿ ಪಡೆಯಲು ಮುಂದಾಗಿದ್ದಾರೆ. ಅವರಿಗೆ ಬೇಕಾದ ವರದಿ ಪಡೆಯಲು ಹೊರಗಿನ ಶಿಕ್ಷಣ ತಜ್ಞರನ್ನೂ ಆಯೋಗದಲ್ಲಿ ಸದಸ್ಯರಾಗಿ ಮಾಡಿದ್ದಾರೆ'' ಎಂದು ₹ಕ್ಷೇಪ ವ್ಯಕ್ತಪಡಿಸಿದರು.
''ಕೇಂದ್ರದ ಬರ ಅಧ್ಯಯನ ತಂಡದೆದುರು ಬರ ಪರಿಸ್ಥಿತಿ ಬಗ್ಗೆ ಸರಿಯಾಗಿ ತಿಳಿಸಲಿಲ್ಲ. ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿದ್ಯುತ್ ಸಮಸ್ಯೆ ನಿಭಾಯಿಸುವಲ್ಲಿಯೂ ಎಡವಿದೆ. ಬರಪೀಡಿತ ಪ್ರದೇಶದ ರೈತರಿಗೆ ಪರಿಹಾರ ಕೊಟ್ಟಿಲ್ಲ. ರೈತರ ಸಮಸ್ಯೆ ಆಲಿಸದೇ ಬೇಜವಾಬ್ದಾರಿ ನಡೆಯನ್ನು ಸರ್ಕಾರ ಅನುಸರಿಸುತ್ತಿದೆ'' ಎಂದು ಕಿಡಿ ಕಾರಿದರು.