ಬೆಂಗಳೂರು:''ರಾಜ್ಯದಲ್ಲಿ ಮಾತ್ರವಲ್ಲ, ಇನ್ನು ಮುಂದೆ ದಕ್ಷಿಣ ಭಾರತದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ'' ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ''ಕರ್ನಾಟಕದಲ್ಲಿ ಬಸವಣ್ಣ, ಕನಕದಾಸ, ನಾರಾಯಣ ಗುರು, ಪರಿಯಾರ್, ಅಣ್ಣಮಯ್ಯ ಸಾಮಾಜಿಕ ನ್ಯಾಯ ಬಿತ್ತಿದ್ದಾರೆ. ಎಷ್ಟೇ ಶ್ರಮ ಹಾಕಿದರೂ ಬಿಜೆಪಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಈ ಸಾರಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸನ್ನು ಬಿಜೆಪಿ ಕಾಣುತ್ತಿದೆ. ದಕ್ಷಿಣ ಭಾರತದ ಹೆಬ್ಬಾಗಿಲಲ್ಲೇ ಬಿಜೆಪಿಗೆ ಹಿನ್ನಡೆ ಉಂಟಾಗಲಿದೆ'' ಎಂದರು.
ಇದನ್ನೂ ಓದಿ:ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ:ಮೀಸಲು ಕ್ಷೇತ್ರದಲ್ಲಿ ರಾಜಕೀಯ ರಂಗು
ಮೋದಿ, ಅಮಿತ್ ಶಾ ವಿರುದ್ಧ ಗರಂ:ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಬರುವುದರಿಂದ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬ ಪ್ರಶ್ನೆಗೆ, ''ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಬರಲಿ, ಕೇಂದ್ರ ಸಚಿವ ಅಮಿತ್ ಶಾ ಬರಲಿ, ಅದ್ಯಾವುದು ಲೆಕ್ಕಕ್ಕಿಲ್ಲ'' ಎಂದರು. ನಟ ಸುದೀಪ್ ಬಿಜೆಪಿ ಬೆಂಬಲ ವಿಚಾರವಾಗಿ ಮಾತನಾಡುತ್ತಾ, ''ಮತದಾರರ ಮನಸ್ಸನ್ನು ಸಿನಿಮಾ ನಟ ಆಕರ್ಷಣೆ ಮಾಡಲು ಸಾಧ್ಯವಿಲ್ಲ. ಅವರು ಸಾಂಸ್ಕೃತಿಕ ವ್ಯಕ್ತಿಗಳು, ಅವರು ಏಕೆ ರಾಜಕೀಯ ಹಂಗಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೋ, ಅರ್ಥ ಆಗ್ತಿಲ್ಲ'' ಎಂದು ಹೇಳಿದರು.