ಬೆಂಗಳೂರು: ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರೆಂಟಿ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ಒಂದೆಡೆ ಗ್ಯಾರೆಂಟಿ ಹೆಸರಲ್ಲಿ ಮಹಿಳೆಯರಿಗೆ 2,000 ರೂ. ನೀಡುವುದಾಗಿ ಹೇಳುವ ಸರ್ಕಾರ ಅದೇ ಹಣವನ್ನು ಅವರ ಗಂಡಂದಿರಿಂದ ವಸೂಲಿ ಮಾಡಲು ಮದ್ಯ ಮಾರಾಟದ ಮಾರ್ಗ ಹುಡುಕಿಕೊಂಡಂತಿದೆ. ಹಾಗಾಗಿ ಇದು ಮನಿ ರಿಟರ್ನ್ ಪಾಲಿಸಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಟೀಕಿಸಿದ್ದಾರೆ.
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಸರ್ಕಾರಿ ಮದ್ಯದಂಗಡಿ ತೆರೆಯುತ್ತಿರುವುದಾಗಿ ಅಬಕಾರಿ ಸಚಿವರು ಹೇಳಿರುವುದು ಹಾಸ್ಯಾಸ್ಪದ. ಅಕ್ರಮ ತಡೆಯಲಾಗದಿದ್ದರೆ ನಿಮ್ಮ ಇಲಾಖೆ ಮಾಡುವುದಾದರೂ ಏನು ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಗ್ಯಾರೆಂಟಿ ಯೋಜನೆಯಲ್ಲಿ ಮನೆ ಯಜಮಾನಿ ಹುಡುಕುವ ಹೆಸರಲ್ಲಿ ಅತ್ತೆ-ಸೊಸೆ ನಡುವೆ ಜಗಳ ಹಚ್ಚಿರುವ ಸರ್ಕಾರ ಇನ್ನು ಸಾರಾಯಿ ಕುಡಿಯಲು ಹಣಕ್ಕಾಗಿ ಗಂಡ ಹೆಂಡಿರ ನಡುವೆ ಜಗಳ ಹಚ್ಚಲು ಮುಂದಾಗಿದೆ. ಸರ್ಕಾರ ಆದಾಯ ಗಳಿಸಲು ಮದ್ಯ ಮಾರಾಟ ಮೊರೆ ಹೋದರೆ, ಸರ್ಕಾರದ ಗ್ಯಾರೆಂಟಿ ಪಡೆಯುವ ಮಹಿಳೆಯರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಅಬಕಾರಿ ಇಲಾಖೆ ಪ್ರಸ್ತಾವನೆಯಲ್ಲಿ ಏನಿದೆ?: ರಾಜ್ಯದಲ್ಲಿ ಹೊಸ ಮದ್ಯ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡುವ ಹಾಗೂ ಬಳಕೆಯಲ್ಲಿ ಇಲ್ಲದ ಪರವಾನಗಿಗಳಿಗೆ ಮರುಜೀವ ಕೊಡುವ ಮೂಲಕ ಸಾವಿರಕ್ಕೂ ಹೆಚ್ಚು ಮದ್ಯದಂಗಡಿಗಳನ್ನು ತೆರೆಯುವುದು, 3 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಂದೊಂದರಂತೆ ಹೊಸ ಮದ್ಯದಂಗಡಿಗೆ ಪರವಾನಗಿ ನೀಡುವುದು, ನಗರಗಳ ಸೂಪರ್ ಮಾರ್ಕೆಟ್ಗಳಲ್ಲೂ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡುವುದು, ಮದ್ಯ ಮಾರಾಟ ಮಳಿಗೆಗಳೇ ಇಲ್ಲದ 600ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಮದ್ಯ ನಿರ್ಮೂಲನೆ ಮಾಡಬೇಕು ಎನ್ನುವ ಕೂಗು ಕೇಳುತ್ತಿರುವ ಮಧ್ಯೆ ಇದೀಗ ಸರ್ಕಾರ ಗ್ರಾಮೀಣ ಮಟ್ಟದಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯಲು ಹೊರಟಿರುವುದು ವಿವಾದಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಅಬಕಾರಿ ಇಲಾಖೆಯ ಪ್ರಸ್ತಾವನೆ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ :ಬೆಂಗಳೂರಿನಲ್ಲಿ ಗಣೇಶ ಮೂರ್ತಿ ನಿಮಜ್ಜನ.. ನಗರದ ಈ ದಿನಗಳಲ್ಲಿ ಮದ್ಯ ಮಾರಾಟ ಬಂದ್