ಬೆಂಗಳೂರು: ಕಾಕಂಬಿ ರಫ್ತಿಗೆ ಅವಕಾಶ ಕೊಡುವ ಮೂಲಕ ಅಬಕಾರಿ ಇಲಾಖೆಯಲ್ಲಿ 200 ಕೋಟಿ ರೂ ಅಕ್ರಮ ಮಾಡಲಾಗಿದೆ ಎನ್ನುವುದು ನಿರಾಧಾರ ಆರೋಪ. ಇಲಾಖೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಇಂತಹ ಹತ್ತು ಆಡಿಯೋ ಬಿಡುಗಡೆ ಮಾಡಿದರೂ ನಾನು ಹೆದರುವುದಿಲ್ಲ ಎಂದು ಅಬಕಾರಿ ಇಲಾಖೆ ಸಚಿವ ಕೆ.ಗೋಪಾಲಯ್ಯ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವತ್ತು ನನ್ನ ಮೇಲೆ, ಮುಖ್ಯಮಂತ್ರಿಯವರ ಮೇಲೆ ಹಾಗೂ ನಮ್ಮ ರಾಷ್ಟ್ರೀಯ ಮುಖಂಡರ ಮೇಲೆ ಆರೋಪ ಮಾಡಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ಇವತ್ತು ಬಹಳ ಶೋಚನೀಯ ಸ್ಥಿತಿಗೆ ಬಂದು ತಲುಪಿದಂತಿದೆ ಎಂದು ಟೀಕಿಸಿದರು.
ಕೇನ್ ರಿಸೋರ್ಸ್ ಕಂಪನಿಗೆ ಟೆಂಡರ್ ನೀಡಲು ನಮ್ಮ ಇಲಾಖೆಗೆ ಸಿಎಂ ಆಗಲೀ, ಅವರ ಮನೆಯವರಾಗಲೀ ಅಥವಾ ಇನ್ಯಾರೂ ಕೂಡಾ ನಮಗೆ ಒತ್ತಡ ಹಾಕಿಲ್ಲ. ನಿಯಮದ ಪ್ರಕಾರವೇ ಟೆಂಡರ್ ನೀಡಿದ್ದೇವೆ. ಚುನಾವಣೆ ಸಮಯದಲ್ಲಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ನೀಡಿ, ಇಂತಹ ಹತ್ತು ಆಡಿಯೋ ಬಿಡುಗಡೆ ಮಾಡಿದರೂ ನಾನು ಹೆದರೋದಿಲ್ಲ. ಯಾರೋ ನನ್ನ ಬಳಿ ಬರೋದಕ್ಕೆ ಪ್ರಯತ್ನ ಮಾಡಿದ್ದರು. ಆದರೆ ನಾನು ಅದಕ್ಕೆ ಸೊಪ್ಪು ಹಾಕಿಲ್ಲ. ಹೀಗಾಗಿ ಈಗ ಸುಳ್ಳು ಆರೋಪ ಮಾಡಿದ್ದಾರೆ ಎಂದರು.