ಬೆಂಗಳೂರು:ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ಕರ್ನಾಟಕ ಲೋಕಾಸೇವಾ ಆಯೋಗವನ್ನು ರದ್ದುಗೊಳಿಸಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೆಪಿಎಸ್ಸಿಯನ್ನು ಅಕ್ರಮಗಳ ಕೂಪ ಎಂದು ಕಟುವಾಗಿ ಟೀಕಿಸಿದೆ.
1998, 1999 ಮತ್ತು 2004ನೇ ಸಾಲಿನ ಕೆಎಎಸ್ ನೇಮಕಾತಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ಕರ್ನಾಟಕ ಲೋಕಸೇವಾ ಆಯೋಗ ಮತ್ತು ಸರ್ಕಾರಗಳಿಗೆ ಈವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಾದರೂ ನೇಮಕ ವ್ಯವಸ್ಥೆ ಸರಿಹೋಗಬೇಕು ಎಂದರೆ ಆಯೋಗವನ್ನು ರದ್ದು ಮಾಡುವುದು ಎಲ್ಲಾ ರೀತಿಯಲ್ಲೂ ಸೂಕ್ತ ಮತ್ತು ನ್ಯಾಯಯೋಚಿತ. ರಾಜ್ಯದ ಘನತೆ ಉಳಿಯಬೇಕಿದ್ದರೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಯುಪಿಎಸ್ಸಿ ಮಾದರಿಯಲ್ಲಿ ಹೊಸ ಪದ್ಧತಿಯನ್ನು ಜಾರಿ ಮಾಡುವುದು ಉತ್ತಮ ಎಂದು ನ್ಯಾ. ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
1998ನೇ ಸಾಲಿನ ಕೆಎಎಸ್ ನೇಮಕಾತಿ ಅಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳ ವಿಲೇವಾರಿ ಮಾಡಿ ಹೊರಡಿಸಿರುವ ಆದೇಶದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾಂವಿಧಾನಿಕ ಗುರಿಗಳನ್ನು ಪರಿಣಾಮಕಾರಿಯಾಗಿ ತಲುಪಲು ಪಾರದರ್ಶಕತೆ ತುಂಬಾ ಅತ್ಯಗತ್ಯ. ಆದರೆ ಕಳೆದ 22 ವರ್ಷಗಳಿಂದ ಕೆಪಿಎಸ್ಸಿ ನೇಮಕಾತಿ ವ್ಯಾಜ್ಯ ಮುಂದುವರಿಯುತ್ತಲೇ ಬಂದಿದೆ. ಇದಕ್ಕೆ ಆಯೋಗ ಮತ್ತು ಸರ್ಕಾರಗಳು ಮಾಡಿರುವ ತಪ್ಪುಗಳೇ ಕಾರಣ. 2002ರಿಂದ ಈ ವಿಚಾರ ಕೆಎಟಿ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮುಂದೆ ನಿರಂತರವಾಗಿ ಬರುತ್ತಿದೆ.