ಬೆಂಗಳೂರು/ದೆಹಲಿ :ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಕಾಸರತ್ತು ಮಂಗಳವಾರ ನವದೆಹಲಿಯಲ್ಲಿ ದಿನವಿಡಿ ನಡೆದಿದ್ದು, ಯಾವುದೇ ಫಲ ಪಡೆಯುವಲ್ಲಿ ವಿಫಲವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಶಾಸಕಾಂಗ ಪಕ್ಷದ ನಾಯಕ ಹಾಗೂ ತನ್ಮೂಲಕ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ.
ಕಾಂಗ್ರೆಸ್ ಬಹುಮತ ಪಡೆದ ಬಳಿಕ ರಾಜ್ಯದಲ್ಲಿ ಈ ವಿಚಾರವಾಗಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗದ ನಾಯಕರು ದಿಲ್ಲಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇಬ್ಬರು ನಾಯಕರನ್ನು ದಿಲ್ಲಿಗೆ ಕರೆಸಿಕೊಂಡು ಸುದೀರ್ಘ ಚರ್ಚೆ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರಲ್ಲಿ ಒಬ್ಬರನ್ನು ಮನವೊಲಿಸಿ ಸಿಎಂ ಪಟ್ಟಕ್ಕೆ ಏರಿಸುವ ಯತ್ನವನ್ನು ಮಾಡಿದ್ದಾರೆ. ಆದರೆ ಸಂಜೆಯವರೆಗೂ ನಡೆಸಿದ ಪ್ರಯತ್ನ ಅಷ್ಟಾಗಿ ಫಲ ಕೊಟ್ಟಿಲ್ಲ.
ಸಿದ್ದರಾಮಯ್ಯ ಸೋಮವಾರ ಮಧ್ಯಾಹ್ನವೇ ಬೆಂಗಳೂರಿನಿಂದ ದಿಲ್ಲಿಗೆ ತೆರಳಿದ್ದು, ಅಲ್ಲಿ ತಮ್ಮ ಬೆಂಬಲಿಗ ಶಾಸಕರ ಮೂಲಕ ಮಲ್ಲಿಕಾರ್ಜುನ ಖರ್ಗೆ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ದರು. ಅನಾರೋಗ್ಯದ ಕಾರಣಕ್ಕೆ ಬೆಂಗಳೂರಿನಲ್ಲಿಯೇ ತಂದಿದ್ದ ಡಿ ಕೆ ಶಿವಕುಮಾರ್ ಸಹ ತಮ್ಮ ಸೋದರ ಹಾಗೂ ಸಂಸದ ಡಿ.ಕೆ ಸುರೇಶರನ್ನು ನಿನ್ನೆಯೇ ದಿಲ್ಲಿಗೆ ಕಳುಹಿಸಿದ್ದು ತಮ್ಮ ಬೆಂಬಲಿಗರ ಮೂಲಕ ಮಲ್ಲಿಕಾರ್ಜುನ್ ಖರ್ಗೆ ಅವರ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ದಾರೆ. ಇದೆಲ್ಲದರ ಬಳಿಕ ತಮ್ಮ ಉಪಸ್ಥಿತಿಯ ಅಗತ್ಯ ಮನಗಂಡ ಅವರು ಮಂಗಳವಾರ ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ.
ಮಂಗಳವಾರ ದೆಹಲಿ ಬೆಳವಣಿಗೆ :ಬೆಂಗಳೂರಿನಿಂದ ದಿಲ್ಲಿಗೆ ತಲುಪಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇರವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ತಮ್ಮ ಪಾತ್ರ ಪ್ರಮುಖವಾಗಿದ್ದು, ಈ ಸಾರಿ ಸಿಎಂ ಆಗುವ ಅವಕಾಶವನ್ನ ನೀಡುವಂತೆ ಕೋರಿದ್ದಾರೆ. ಇವರ ಜೊತೆ ಸುದೀರ್ಘ ಚರ್ಚೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ ನಂತರ ಸಂಜೆ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಸಹ ತಮ್ಮ ಬೆಂಬಲಿಗರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿದ್ದು, ಸುದೀರ್ಘ ಸಮಾಲೋಚನೆ ನಡೆಸಿ ತಮ್ಮ ಆಯ್ಕೆಗೆ ಒಂದಿಷ್ಟು ಕಾರಣವನ್ನು ನೀಡಿದ್ದಾರೆ.