ಬೆಂಗಳೂರು: 2023ರ ಜುಲೈ 14ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ತಲುಪಿಸಿದ್ದ ಎಲ್ವಿಎಂ3 ಎಂ4 ಉಡ್ಡಯನ ವಾಹನದ ಕ್ರಯೋಜೆನಿಕ್ ಮೇಲಿನ ಹಂತದ ಬಿಡಿ ಭಾಗಗಳು ಬುಧವಾರ ಭೂಮಿಯ ವಾತಾವರಣಕ್ಕೆ ಅನಿಯಂತ್ರಿತ ಮರುಪ್ರವೇಶಿಸಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಈ ಭಾಗಗಳು ಅಂತಿಮವಾಗಿ ಇಳಿಯುವ ಸ್ಥಳದ ನಿಖರ ಹಾದಿ ಭಾರತದ ಮೇಲಿಲ್ಲ. ಉತ್ತರ ಪೆಸಿಫಿಕ್ ಮಹಾಸಾಗರದ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಈಗ ಮರುಪ್ರವೇಶ ಮಾಡುವ ರಾಕೆಟ್‌ನ ಭಾಗವು ಎಲ್ವಿಎಂ3 ಎಂ4ನ ಉಡ್ಡಯನ ವಾಹನದ ಭಾಗವಾಗಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆ ಉಡಾವಣೆಯಾದ 124 ದಿನಗಳಲ್ಲಿ ರಾಕೆಟ್‌ನ ದೇಹದ ಭಾಗ ಮರುಪ್ರವೇಶ ಮಾಡಿದೆ ಎಂದು ಇಸ್ರೋ ಹೇಳಿದೆ.