ಬೆಂಗಳೂರು : ಚಂದ್ರಯಾನ 3 ಯೋಜನೆಯ ಕಾರ್ಯಾಚರಣೆ ಬಹುತೇಕ ಸ್ಥಗಿತಗೊಂಡಿದೆ. ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಸಂಪೂರ್ಣವಾಗಿ ನಿದ್ರೆಗೆ ಜಾರಿದ್ದು, ಮತ್ತೆ ಎಚ್ಚರಗೊಳಿಸುವ ಯಾವುದೇ ಭರವಸೆ ಇಲ್ಲ, ಇವು ಸಕ್ರಿಯಗೊಳ್ಳುವುದಾದರೆ ಈಗಾಗಲೇ ಆಗಬೇಕಿತ್ತು ಎಂದು ಮಿಷನ್‌ನೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿದ್ದ ಬಾಹ್ಯಾಕಾಶ ಆಯೋಗದ ಸದಸ್ಯ ಹಾಗೂ ಮಾಜಿ ಇಸ್ರೋ ಅಧ್ಯಕ್ಷ ಎ ಎಸ್ ಕಿರಣ್ ಕುಮಾರ್ ಹೇಳಿದರು.
ಈ ಯೋಜನೆಯನ್ನು ಒಂದು ಚಂದ್ರನ ದಿನ ಅಂದರೆ 14 ಭೂಮಿಯ ದಿನಗಳು ಎಂದು ಅಂದಾಜಿಸಿ ಕಾರ್ಯಾಚರಣೆಗಾಗಿ ವಿಕ್ರಮ್ ಮತ್ತು ಪ್ರಾಗ್ಯಾನ್ ರೋವರ್ ವಿನ್ಯಾಸಗೊಳಿಸಲಾಗಿತ್ತು. ಆದರೆ, ಇವು ಎರಡನೇ ಇನ್ನಿಂಗ್ಸ್ ಆರಂಭಿಸಬಹುದು ಎಂಬ ವಿಶ್ವಾಸ ಅನೇಕರಲ್ಲಿತ್ತು. ಚಂದಿರನ ಒಂದು ದಿನದ ನಂತರ ದಕ್ಷಿಣ ಧ್ರುವದಲ್ಲಿ ಸೂರ್ಯನ ಬೆಳಕು ಬೀಳದೇ ಸಂಪೂರ್ಣವಾಗಿ ಕತ್ತಲು ಆವರಿಸುತ್ತದೆ. ಈ ವೇಳೆ ಯಾವುದೇ ಅಧ್ಯಯನ ಮಾಡಲು ಸಾಧ್ಯವಿಲ್ಲ. ಹಾಗಾಗಿ, 14 ದಿನಗಳ ಅಧ್ಯಯನಕ್ಕೆ ಲ್ಯಾಂಡರ್ ಮತ್ತು ರೋವರ್ ಅನ್ನು ಇಸ್ರೋ ಅಭಿವೃದ್ಧಿಪಡಿಸಿತ್ತು. ಇನ್ನು ಮುಂದೆ ಮತ್ತೆ ಚಂದ್ರಯಾನ 3 ಪುನರುಜ್ಜೀವನಗೊಳ್ಳುವ ಭರವಸೆ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ :Chandrayaan - 3 Mission : ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್‌ನಿಂದ ಸಿಗ್ನಲ್ ಲಭಿಸಿಲ್ಲ : ಇಸ್ರೋ
ಈ ಹಿಂದೆ ಕೂಡ ಚಂದ್ರಯಾನ 3 ಮಿಷನ್‌ನ ಭಾಗವಾಗಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನಿಂದ ಸದ್ಯಕ್ಕೆ ಯಾವುದೇ ಸಿಗ್ನಲ್‌ಗಳು ಬಂದಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಇದನ್ನೂ ಓದಿ :ಭೂಮಿಯ ಎಲೆಕ್ಟ್ರಾನ್ಗಳಿಂದ ಚಂದ್ರನಲ್ಲಿ ನೀರು ; ಚಂದ್ರಯಾನ - 1 ಮಾಹಿತಿಯಿಂದ ಸಂಶೋಧನೆ
ಚಂದ್ರಯಾನ 3 ಬಗ್ಗೆ.. :ಚಂದ್ರಯಾನ 3 ಗಗನ ನೌಕೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14 ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿತ್ತು. 26 ಕೆಜಿ ತೂಕದ 6 ಚಕ್ರಗಳ ರೋವರ್ ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಗೆ ಇಳಿದಿತ್ತು. ಶತಮಾನಗಳಿಂದಲೂ ಬೆಳಕನ್ನೇ ಕಾಣದ ಚಂದ್ರನ ಈ ದಕ್ಷಿಣ ಧ್ರುವದ ಮೇಲೆ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆ ಇಳಿಸಿದ ಹೆಗ್ಗಳಿಕೆಗೆ ಭಾರತೀಯ ವಿಜ್ಞಾನಿಗಳು ಪಾತ್ರರಾಗಿದ್ದರು. ಜೊತೆಗೆ, ವಿಕ್ರಮ್ ಲ್ಯಾಂಡರ್ನಲ್ಲಿದ್ದ ಪ್ರಜ್ಞಾನ್ ರೋವರ್ ಹೊರಬಂದು ತನ್ನ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. 14 ದಿನಗಳ ಕಾಲ ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಿದ್ದ ರೋವರ್ ಹಲವಾರು ಉಪಯುಕ್ತ ಮಾಹಿತಿ ಮತ್ತು ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು.
ಇದನ್ನೂ ಓದಿ :ಚಂದ್ರನಲ್ಲಿಗೆ ಮಾನವರನ್ನ ಕಳುಹಿಸುವ ಪ್ಲಾನ್ ಇದೆ : ಚಂದ್ರಯಾನ 3 ನಿರ್ದೇಶಕ ಡಾ ವೀರಮುತ್ತುವೇಲ್