ರಾಮನಗರ/ಬೆಂಗಳೂರು: ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲೇಟ್ ಜನರಲ್ ಟಮ್ಮಿ ಬೆನ್ ಹೈಮ್ ಅವರು ಇಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಬಿಡದಿಯಲ್ಲಿರುವ ತೋಟದ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಕರ್ನಾಟಕ - ಇಸ್ರೇಲ್ ಬಾಂಧವ್ಯ, ಇತರ ವಿಚಾರಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ.
ಈ ಸೌಹಾರ್ದಯುತ ಭೇಟಿ ಬಗ್ಗೆ ಎಕ್ಸ್ನಲ್ಲಿ ಕೆಲವು ಫೋಟೋಗಳ ಜೊತೆಗೆ ಪೋಸ್ಟ್ ಹಾಕಿರುವ ಹೆಚ್ ಡಿ ಕುಮಾರಸ್ವಾಮಿ "ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲೇಟ್ ಜನರಲ್ ಆಗಿರುವ ಗೌರವಾನ್ವಿತ ಟಮ್ಮಿ ಬೆನ್ ಹೈಮ್ ಅವರು ಇಂದು ನನ್ನನ್ನು ಸೌಹಾರ್ದಯುತವಾಗಿ ಭೇಟಿ ಆಗಿದ್ದರು. ಬಿಡದಿಯ ನನ್ನ ತೋಟದಲ್ಲಿ ನಡೆದ ಈ ಭೇಟಿಯ ವೇಳೆ ಹೈಮ್ ಅವರ ಜೊತೆ ಕರ್ನಾಟಕ - ಇಸ್ರೇಲ್ ಬಾಂಧವ್ಯ, ಪರಸ್ವರ ಸಹಭಾಗಿತ್ವ, ಸಹಕಾರ, ಜ್ಞಾನ ತಂತ್ರಜ್ಞಾನ ವಿನಿಮಯ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು" ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ, ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧ, ಹಮಾಸ್ ವಶದಲ್ಲಿರುವ ಇಸ್ರೇಲ್, ಅಮೆರಿಕ ಸೇರಿ ವಿವಿಧ ದೇಶಗಳ ಮುಗ್ಧ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ನಡೆಸಲಾಗುತ್ತಿರುವ ಹೋರಾಟದ ಬಗ್ಗೆಯೂ ಅವರು ಮಾಹಿತಿ ನೀಡಿದರು. ಯುದ್ಧಪೀಡಿತ ದೇಶದಲ್ಲಿ ಆದಷ್ಟು ಬೇಗ ಶಾಂತಿ ನೆಲೆಸುವಂತೆ ಆಗಲಿ. ಹಮಾಸ್ ವಶದಲ್ಲಿರುವ ಎಲ್ಲ ಒತ್ತೆಯಾಳುಗಳು ಸುರಕ್ಷಿತವಾಗಿ ಬಿಡುಗಡೆಯಾಗಿ ಬರಲಿ ಎಂದು ಈ ವೇಳೆ ಹಾರೈಸಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.