ಬೆಂಗಳೂರು :ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿಗಳ ನಡುವೆ ಸಂಘರ್ಷ ಮುಂದುವರೆದಿದೆ. ಈ ಸಂಬಂಧ ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿರುವಂತೆ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಜೊತೆಗೆ ತುರ್ತು ಸಂದರ್ಭಗಳಲ್ಲಿ ರಾಯಭಾರಿ ಕಚೇರಿಯನ್ನು ಸಂಪರ್ಕಿಸುವಂತೆ ಕೋರಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಹಮಾಸ್ ಉಗ್ರರ ಕಾದಾಟದಲ್ಲಿ ಒಟ್ಟು 600ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರಿಗೆ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಈ ಸಂಬಂಧ ಹೆಲ್ಪ್ಲೈನ್ ಮತ್ತು ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರವನ್ನು ಸರ್ಕಾರ ತೆರೆದಿದ್ದು, ಇಲ್ಲಿ ಸಂಪರ್ಕಿಸುವಂತೆ ಕೋರಲಾಗಿದೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಇಸ್ರೇಲ್ನಲ್ಲಿನ ಸದ್ಯದ ಪರಿಸ್ಥಿತಿ ಕಳವಳಕಾರಿಯಾಗಿದೆ. ಮಾನವೀಯತೆಯ ದೃಷ್ಟಿಯಿಂದ ನಾವು ಎಲ್ಲೆಡೆ ಶಾಂತಿ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸುತ್ತೇವೆ. ಇಸ್ರೇಲ್ನಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಪ್ರಜೆಗಳ ಸುರಕ್ಷತೆಯ ದೃಷ್ಟಿಯಿಂದ ವಿದೇಶಾಂಗ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಇಸ್ರೇಲ್ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ವಿನಂತಿಸಲಾಗಿದೆ. ದಯವಿಟ್ಟು ಹೆಚ್ಚಿನ ಜಾಗರೂಕತೆಯನ್ನು ವಹಿಸುತ್ತಾ, ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ ಸುರಕ್ಷತಾ ಆಶ್ರಯಗಳ (ಬಾಂಬ್ ಶೆಲ್ಟರ್) ಹತ್ತಿರ ಇರಬೇಕಾಗಿ ವಿನಂತಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಇಸ್ರೇಲ್ ಹೋಮ್ ಫ್ರಂಟ್ ಕಮಾಂಡ್ ವೆಬ್ಸೈಟ್ ಅಥವಾ ಕರಪತ್ರವನ್ನು ವೀಕ್ಷಿಸಿ ಎಂದು ತಿಳಿಸಲಾಗಿದೆ. ಜೊತೆಗೆ https://www.indembassyisrael.gov.in ಸಂಪರ್ಕಿಸಲು ಕೋರಲಾಗಿದೆ.