ಬೆಂಗಳೂರು:ಕೊರೊನಾ ಸೋಂಕಿನ ಲಕ್ಷಣವಿಲ್ಲದ ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಐಸೋಲೇಷನ್ ಮಾಡಲಾಗುತ್ತದೆ. ಅಲ್ಲದೆ ಫೆಸಿಲಿಟಿ ಮ್ಯಾನೇಜರ್ಗಳನ್ನು ನೇಮಕ ಮಾಡಿ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ನಗರದ ಪೌರ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಕೊರೊನೇತರ ರೋಗಿಗಳಿಗೆ ಕ್ರಿಟಿಕಲ್ ಮೆಡಿಕಲ್ ಕೇರ್ ಅಥವಾ ಚಿಕಿತ್ಸೆಯ ಅಗತ್ಯವಿಲ್ಲ. ಅವರು ಪ್ರತ್ಯೇಕವಾಗಿದ್ದು, ಇತರರಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕಾಗಿದೆ. ಅಲ್ಲಿ ಉತ್ತಮ ಆಹಾರ ನೀಡಲಾಗುತ್ತಿದೆ ಎಂದರು.
ನಿರ್ಣಾಯಕ ಸ್ಥಿತಿಯಲ್ಲಿರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಇತ್ತೀಚಿನ ರೋಗಿಗಳಲ್ಲಿ ಶೇಕಡಾ ಎಂಭತ್ತರಷ್ಟು ಜನ ಸೋಂಕು ರಹಿತ ಲಕ್ಷಣ ಹೊಂದಿದ್ದಾರೆ ಎಂದು ತಿಳಿಸಿದರು.
ಸುಮಾರು ಇಪ್ಪತ್ತೆರಡು ಕೋವಿಡ್ ಕೇರ್ ಸೆಂಟರ್ಗಳನ್ನು ಗುರುತಿಸಿ 17 ಸಾವಿರ ಬೆಡ್ಗಳನ್ನು ತಯಾರಿ ಮಾಡಲಾಗುತ್ತಿದೆ ಎಂದ ಅವರು, ಕಂಠೀರವ ಸ್ಟೇಡಿಯಂನಲ್ಲಿ ವಿರೋಧವಿದ್ರೂ ಅಲ್ಲಿಯೂ ಕೇರ್ ಸೆಂಟರ್ ಮಾಡಲಾಗುತ್ತದೆ. ಬಿಡಿಎ ಫ್ಲಾಟ್ಗಳಿದ್ರೂ ಅಲ್ಲಿಯೂ ನೋಡಲಾಗ್ತಿದೆ ಎಂದರು.
ಐಸಿಎಂಆರ್ ವೆಬ್ಸೈಟ್ನಲ್ಲಿ ರೋಗಿಗಳ ಮಾಹಿತಿ ಇಲ್ಲ: ಕೋವಿಡ್ ರೋಗಿಗಳಿಗೆ ಆಸ್ಪತ್ರೆ ಬೆಡ್ ಸಿಗುವುದು ತಡವಾಗುತ್ತಿರುವುದಕ್ಕೆ ಸ್ಪಷ್ಟನೆ ನೀಡಿದ ಆಯುಕ್ತರು, ಖಾಸಗಿ ಲ್ಯಾಬ್ನವರು ನೇರವಾಗಿ ರೋಗಿಗಳಿಗೆ ಮಾಹಿತಿ ತಿಳಿಸುತ್ತಿದ್ದಾರೆ. ಐಸಿಎಂಆರ್ ವೆಬ್ಸೈಟ್ನಲ್ಲಿ ಪಾಸಿಟಿವ್ ರೋಗಿಗಳ ಮಾಹಿತಿ ಅಳವಡಿಸುತ್ತಿಲ್ಲ. ಹಾಗಾಗಿ ಪಾಲಿಕೆ ಗಮನಕ್ಕೆ ಇದು ಬರುತ್ತಿಲ್ಲ. ಆದ್ದರಿಂದ ರೋಗಿಗಳು ಬೆಡ್ ಸಿಗದೆ ಅಲ್ಲಿ ಇಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಸರ್ಕಾರವೂ ಖಾಸಗಿ ಲ್ಯಾಬ್ಗಳಿಗೆ ಆದೇಶಿಸಿದ್ದು, ಮೊದಲು ಐಸಿಎಂಆರ್ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದು ಸೂಚಿಸಿದೆ. ಅಲ್ಲದೇ ನೇರವಾಗಿ ರೋಗಿಗಳಿಗೆ ತಿಳಿಸದಂತೆ ಆದೇಶಿಸಲಾಗಿದೆ ಎಂದರು.
ಹೊರಗಡೆ ಶವ ಸಂಸ್ಕಾರ ಸಾಧ್ಯವಿಲ್ಲ: ಬೆಂಗಳೂರು ಬಿಟ್ಟು ಹೊರಗಡೆ ಶವ ಸಂಸ್ಕಾರ ಮಾಡಲು ಸಾಧ್ಯವಿಲ್ಲ. ನಗರದ ನಲವತ್ತು ರುದ್ರಭೂಮಿ ಹಾಗೂ ಹನ್ನೆರಡು ವಿದ್ಯುತ್ ಚಿತಾಗಾರದಲ್ಲೇ ಕೇಂದ್ರದ ನಿಯಮಗಳ ಪ್ರಕಾರ ಶವ ಸಂಸ್ಕಾರ ಮಾಡಲಾಗುತ್ತದೆ. ಹೂಳುವುದಾದರೆ ಎಂಟು-ಹತ್ತು ಅಡಿ ಆಳದಲ್ಲಿ ಹೂಳಬೇಕು ಎಂಬ ನಿಯಮವಿದೆ ಎಂದು ತಿಳಿಸಿದರು.
ಹದಿನಾಲ್ಕು ದಿನದ ಮೂರು ಕ್ವಾರಂಟೈನ್ ಅವಧಿ ಮುಗಿದರೆ ಕೋವಿಡ್ ಪ್ರಕರಣ ಕಡಿಮೆಯಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಎರಡು ಹಂತ ಕಳೆದಿದ್ದು, ಇನ್ನೊಂದು ಹಂತ ಗಂಭೀರವಾಗಿದೆ. ಹಾಗಾಗಿ ಎಚ್ಚರವಾಗಿರಬೇಕಾಗಿದೆ ಎಂದು ಸೂಚಿಸಿದರು.
ಪೌರಕಾರ್ಮಿಕರಿಗೆ ಸ್ಯಾನಿಟೈಸ್ ಮಾಡಲು, ಶುಚಿತ್ವಗೊಳ್ಳಲು ಐವತ್ತು ಜಾಗದಲ್ಲಿ ಮಸ್ಟರಿಂಗ್ ಸೆಂಟರ್ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.