ಬೆಂಗಳೂರು:ದೇಶದ ಅಭಿವೃದ್ಧಿಗೆ ವೀರಶೈವ ಲಿಂಗಾಯತ ಸಮುದಾಯ ಮತ್ತು ಮಠಗಳ ಕೊಡುಗೆ ಅಪಾರ ಎಂದು ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು. ಸಚಿವರಾದ ಬಳಿಕ ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಮತ್ತು ಮಠಾಧೀಶರು ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಅನ್ನ, ಜ್ಞಾನ ನೀಡಿದ್ದಾರೆ. ಜಗತ್ತಿಗೆ ಸಾಮಾಜಿಕ ನ್ಯಾಯ ನೀಡಿದ್ದು ವೀರಶೈವ ಲಿಂಗಾಯತ ಸಮುದಾಯ. ಇಂತಹ ಸಮಾಜದಲ್ಲಿ ಇಂದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀವ್ರ ಹಿಂದುಳಿದ ಅನೇಕ ಜನರಿದ್ದಾರೆ. ಅವರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ಮೀಸಲಾತಿ ದೊರಕಬೇಕು. ಇದಕ್ಕಾಗಿ ಮಹಾಸಭಾ ಶ್ರಮಿಸುತ್ತಿದೆ ಎಂದರು.
ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತರಿಗೆ ಮೀಸಲು ಕಲ್ಪಿಸಬೇಕು ಎಂದು ಮಹಾಸಭಾ ಹಿಂದಿನಿಂದಲೂ ಆಗ್ರಹಿಸುತ್ತಿದೆ. ಇದಕ್ಕೆ ನಿರಂತರ ಪ್ರಯತ್ನ ಮಾಡಲಾಗುವುದು ಎಂದು ಇದೇ ವೇಳೆ ಅವರು ಭರವಸೆ ಕೊಟ್ಟರು. ಸಮಾಜದ ಎಲ್ಲ ಒಳಪಂಗಡಗಳನ್ನು ಮತ್ತು ಸರ್ವರನ್ನೂ ಒಗ್ಗೂಡಿಸಿ ಸಮಾಜದಲ್ಲಿ ಒಟ್ಟಾಗಿ ತೆಗೆದುಕೊಂಡು ಹೋಗಲು ಪೂಜ್ಯರಾದ ಮ.ನಿ.ಪ್ರ. ಶ್ರೀ ಕುಮಾರಸ್ವಾಮಿ ಅವರು ಈ ಸಂಸ್ಥೆ ಕಟ್ಟಿದ್ದಾರೆ. ಅವರ ಆಶಯವನ್ನು ಸಭಾದ ಎಲ್ಲ ಅಧ್ಯಕ್ಷರು ಮುಂದುವರೆಸಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.