ಬೆಂಗಳೂರು:ಕೋವಿಡ್ನಿಂದ ಗುಣಮುಖರಾದವರಲ್ಲಿ ಹಲವು ಬಗೆಯ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಸರ್ಕಾರ ಕೂಡಲೇ ತಜ್ಞರ ಸಮಿತಿ ರಚಿಸಿ ಅಧ್ಯಯನ ಕೈಗೊಂಡು, ಸಮುದಾಯದ ಆರೋಗ್ಯ ಕಾಪಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.
ತಜ್ಞರ ತಂಡ ರಚಿಸಿ ಸಮುದಾಯದ ಆರೋಗ್ಯ ಕಾಪಾಡಲು ಈಶ್ವರ್ ಖಂಡ್ರೆ ಆಗ್ರಹ - ರಾಜ್ಯ ಸರ್ಕಾರಕ್ಕೆ ಈಶ್ವರ ಖಂಡ್ರೆ ಆಗ್ರಹ
ಕೋವಿಡ್ನಿಂದ ಗುಣಮುಖರಾದ ಯುವಜನರಲ್ಲಿ ಈ ಹಿಂದೆ ಯಾವುದೇ ರೋಗ ಇಲ್ಲದಿದ್ದರೂ ಹಲವರಲ್ಲಿ ಸಾಂಕ್ರಾಮಿಕವಲ್ಲದ ದೀರ್ಘಕಾಲೀನ ರೋಗ ಲಕ್ಷಣ ಗೋಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ದೇಶದ ಭವಿಷ್ಯವಾದ ಯುವಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾದ ಹಲವರಲ್ಲಿ ಸೋಂಕು ಮತ್ತು ಅವರು ತೆಗೆದುಕೊಂಡ ಔಷಧಗಳ ಪ್ರತೀಕೂಲ ಪರಿಣಾಮದಿಂದಾಗಿ ಮಧುಮೇಹ, ರಕ್ತದೊತ್ತಡ, ಪಾರ್ಶ್ವವಾಯು, ದೃಷ್ಟಿ ದೋಷ, ಮೂತ್ರಪಿಂಡ ಮತ್ತು ಮೂತ್ರ ಕೋಶದ ಸಮಸ್ಯೆ ಹೀಗೆ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂಬ ವರದಿಗಳು ಬರುತ್ತಿದ್ದು, ಇದರ ಸತ್ಯಾಸತ್ಯತೆಯ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಅಧ್ಯಯನವನ್ನು ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತಗೊಳಿಸದೆ, ಗ್ರಾಮೀಣ ಪ್ರದೇಶಗಳಲ್ಲೂ ಸೋಂಕಿಗೆ ಒಳಗಾದವರಲ್ಲಿ ಕಾಣಿಸಿಕೊಳ್ಳಬಹುದಾದ ದೀರ್ಘಕಾಲೀನ ಸಮಸ್ಯೆಗಳ ಬಗ್ಗೆ ಯಾದೃಚ್ಛಿಕವಾಗಿ (Random) ತಪಾಸಣೆ ಮಾಡಿ ಸಮುದಾಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.