ಬೆಂಗಳೂರು: ಬಜೆಟ್ ಅಧಿವೇಶನ ಪೂರ್ವದಲ್ಲಿ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕಲ್ಯಾಣ ಕರ್ನಾಟಕದ ಭಾಗದ ಶಾಸಕರು ನಿರ್ಧರಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ರಾತ್ರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಭೆ ನಡೆಸಿದ ಶಾಸಕರು ಈ ತೀರ್ಮಾನ ಕೈಗೊಂಡಿದ್ದಾರೆ.
ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಈಶ್ವರ ಖಂಡ್ರೆ ಅವರು, ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಜೊತೆ ಸಭೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಬಂದು 31 ತಿಂಗಳಾಯ್ತು. ಕಲ್ಯಾಣ ಕರ್ನಾಟಕ ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮಗೆ ಉದ್ಯೋಗ, ಶಿಕ್ಷಣದಲ್ಲಿ ವಿಶೇಷ ಸ್ಥಾನಮಾನವಿದೆ. ಅದನ್ನು ಕಡೆಗಣಿಸುವ ಕೆಲಸ ಸರ್ಕಾರ ಮಾಡಿದೆ. ಇದುವರೆಗೂ ಒಂದೇ ಒಂದು ಉದ್ಯೋಗ ಭರ್ತಿ ಮಾಡಿಲ್ಲ. 260 ಕೋಟಿ ರೂ. ಮಾತ್ರ ಇಲ್ಲಿವರೆಗೆ ಖರ್ಚಾಗಿದೆ. ಇದು ಯಾವ ಸೀಮೆಯ ಅಭಿವೃದ್ಧಿ ಎಂದು ಕಿಡಿಕಾರಿದರು.