ಬೆಂಗಳೂರು: ರಾಜ್ಯಾದ್ಯಂತ ಮಳೆ ಅನಾಹುತ ಹೆಚ್ಚಾಗುತ್ತಿದ್ದು, ಸರ್ಕಾರ ಕೂಡಲೇ ಪರಿಹಾರ ಕಾರ್ಯಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಟ್ವೀಟ್ ಮೂಲಕ ಈ ಒತ್ತಾಯ ಮಾಡಿರುವ ಅವರು, ಸೋರುತ್ತಿದ್ದ ಅದೆಷ್ಟು ಶಾಲೆಗಳ ಕೋಣೆಗಳಿಗೆ ಛಾವಣಿ ಹಾಕಿದ್ದೀರಾ? ಹೊಸ ಪರಿಹಾರ ಘೋಷಿಸುವ ಮುನ್ನ ಹಳೇ ಲೆಕ್ಕ ಕೊಡಿ. ಬರೀ ಬಾಯಿ ಮಾತಿನ ಸಾಂತ್ವನ ಬೇಡ. ಈ ಬಾರಿಯಾದ್ರೂ ತತಕ್ಷಣ ಪರಿಹಾರ ನೀಡಿ. ನೆರ ಪೀಡಿತರ ಬದುಕು ಕಟ್ಟಿಕೊಡಿ. ಉತ್ತರಿಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಬಿ.ಸಿ. ಪಾಟೀಲ್, ಸುರೇಶ್ ಕುಮಾರ್ ಹಾಗೂ ಆರ್. ಅಶೋಕ್ ಅವರನ್ನು ಆಗ್ರಹಿಸಿದ್ದಾರೆ.
ಹೌದು, ಪ್ರವಾಹದ ಹೆಸರಲ್ಲಿ ಕಳೆದ ವರ್ಷ ರಾಜ್ಯ ಬಿಜೆಪಿ ಸರ್ಕಾರ ನೀಡಿದ್ದ ಭರವಸೆಗಳು ಏನಾದವು? ಅದೆಷ್ಟು ಜನರಿಗೆ ಮನೆ ಕಟ್ಟಿಸಿಕೊಟ್ಟಿದ್ದೀರಾ? ರೈತನ ಬೆಳೆಗೆ ಎಷ್ಟು ಪರಿಹಾರ ಕೊಟ್ಟಿದ್ದೀರಾ? ಕೊಚ್ಚಿ ಹೋದ ಅದೆಷ್ಟು ರಸ್ತೆ ಸೇತುವೆಗಳನ್ನ ಪುನರ್ ನಿರ್ಮಾಣ ಮಾಡಿದ್ದೀರಾ? ಎಂದು ಕೂಡ ಪ್ರಶ್ನೆ ಹಾಕಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಬೆಳಗ್ಗೆ ಟ್ವೀಟ್ ಮಾಡಿ ರಾಜ್ಯ ಸರ್ಕಾರ ಹಾಗೂ ಸಚಿವರನ್ನು ತೀವ್ರವಾಗಿ ಥರಾಟೆಗೆ ತೆಗೆದುಕೊಂಡಿದ್ದರು. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೆರೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಅದಾಗಲೇ ಭೇಟಿಕೊಡಲು ಆರಂಭಿಸಿದ್ದಾರೆ. ಈ ಸಂದರ್ಭ ಪ್ರತಿಪಕ್ಷ ಕಾಂಗ್ರೆಸ್ನ ಹಲವು ನಾಯಕರು ಸರ್ಕಾರದ ವಿರುದ್ಧ ಮುಗಿಬೀಳುವ ಕಾರ್ಯ ಆರಂಭಿಸಿದ್ದಾರೆ.