ಬೆಂಗಳೂರು:ನಗರದ ಹೊರವಲಯ ನೆಲಮಂಗಲ ಬಳಿಯ ಮಾದವಾರದಲ್ಲಿರುವ ವಿಶಾಲ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಪ್ರತ್ಯೇಕೀಕರಣ (ಕ್ವಾರಂಟೈನ್) ಘಟಕ ಮತ್ತು ಕೋವಿಡ್ -19 ತುರ್ತು ಚಿಕಿತ್ಸಾ ಘಟಕ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಸೋಂಕು ತಗುಲಿದ 3 ಮತ್ತು 4ನೇ ವಾರಗಳಲ್ಲಿ ಸೋಂಕಿತರ ಸಂಖ್ಯೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ರೋಗ ಲಕ್ಷಣ ಹಲವು ದಿನಗಳ ಕಾಲ ಗೋಚರಿಸದ ಕಾರಣ ಪ್ರಸ್ತುತ ರಾಜ್ಯದಲ್ಲಿ ಎಷ್ಟು ಸೋಂಕಿತರಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ಕೆಲವು ತಜ್ಞ ವೈದ್ಯರು ಈ ಸಂಖ್ಯೆ 1 ಲಕ್ಷ ಮುಟ್ಟುವ ಭೀತಿಯನ್ನೂ ವ್ಯಕ್ತಪಡಿಸಿರುವ ಹಿನ್ನೆಲೆ ಎಲ್ಲಾ ಸಂಭವನೀಯ ಪರಿಸ್ಥಿತಿ ಎದುರಿಸಲು ಸರ್ಕಾರ ಸನ್ನದ್ಧವಾಗಬೇಕು ಎಂದು ಒತ್ತಾಯಿಸಿದ್ದಾರೆ.