ಬೆಂಗಳೂರು:ಸದ್ಗುರು ಜಗ್ಗಿ ವಾಸುದೇವ್ ಮುಖ್ಯಸ್ಥಿಕೆಯ ಈಶ ಫೌಂಡೇಶನ್ ಕಾವೇರಿ ಕೂಗು ಅಭಿಯಾನದಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವಿಚಾರವಾಗಿ ದಾಖಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ಆಗಿ ದಾಖಲಿಸಿಕೊಂಡಿರುವುದನ್ನು ಪ್ರಶ್ನಿಸಿ ಈಶ ಔಟ್ ರೀಚ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಈಶ ಫೌಂಡೇಶನ್ ಸಾರ್ವಜನಿಕರಿಂದ ಹಣ ಸಂಗ್ರಹಿಸುವುದನ್ನು ಪ್ರಶ್ನಿಸಿ ವಕೀಲ ಎ.ವಿ ಅಮರನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಕಳೆದ 2020ರ ಅಕ್ಟೋಬರ್ 15ರಂದು ಸ್ವಯಂಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿಕೊಂಡಿತ್ತು. ವಕೀಲ ಎ.ವಿ ಅಮರನಾಥ್, ಪ್ರಕರಣದ ವಿಚಾರವಾಗಿ ಅಂತರ್ರಾಷ್ಟ್ರೀಯ ವಾಹಿನಿಯೊಂದಕ್ಕೆ ಲೀಗಲ್ ನೋಟಿಸ್ ಜಾರಿ ಮಾಡಿ ಸೂಕ್ತ ವಿವರಣೆ ನೀಡದ ಹಿನ್ನೆಲೆಯಲ್ಲಿ ಅರ್ಜಿಯನ್ನು ಸ್ವಯಂಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಳ್ಳಲಾಗಿತ್ತು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ ವೇಳೆ, ಈಶ ಔಟ್ ರೀಚ್ ಪರ ಪಕೀಲರು ಪೀಠಕ್ಕೆ ಮಾಹಿತಿ ನೀಡಿ, ಹೈಕೋರ್ಟ್ ಅರ್ಜಿಯನ್ನು ಸ್ವಯಂ ಪ್ರೇರಿತವಾಗಿ ಪರಿವರ್ತಿಸಿಕೊಂಡ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಸ್ಪೆಷಲ್ ಲೀವ್ ಪಿಟಿಷನ್ (ಎಸ್ಎಲ್ಪಿ) ದಾಖಲಿಸಲಾಗಿದೆ ಎಂದರು.
ಹೇಳಿಕೆ ದಾಖಲಿಕೊಂಡ ಪೀಠ, ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಿತು.