ಬೆಂಗಳೂರು:ಸಿಸಿಬಿ ಜೊತೆ ಆಂತರಿಕ ಭದ್ರತಾ ವಿಭಾಗ( ಐಎಸ್ಡಿ) ಕೂಡ ಡ್ರಗ್ಸ್ ದಂಧೆ ಪ್ರಕರಣದ ತನಿಖೆಗಿಳಿದಿದ್ದು, ಕಿರುತೆರೆ ನಟ-ನಟಿಯರನ್ನು ವಿಚಾರಣೆ ಮಾಡುತ್ತಿದೆ.
ಡ್ರಗ್ಸ್ ದಂಧೆ ಪ್ರಕರಣದಲ್ಲಿ ಮೊದಲ ಆರೋಪಿ ಪೆಡ್ಲರ್ ಅನಿಕಾಳನ್ನು ಬಂಧಿಸಿದ ಸಿಸಿಬಿ, ಸ್ಯಾಂಡಲ್ವುಡ್ ನಟ-ನಟಿಯರಿಗೆ ಮಾದಕ ಜಾಲದ ನಂಟಿದೆ ಎಂದು ಸುಳಿವು ಕೊಟ್ಟಾಗಲೇ, ಇತ್ತ ಐಎಸ್ಡಿಯು ಕಿರುತೆರೆ ನಟ-ನಟಿಯರ ಮಾದಕ ನಂಟಿನ ಕುರಿತು ಮಾಹಿತಿ ಕಲೆ ಹಾಕಲು ಪ್ರಾರಂಭಿಸಿತ್ತು.
ಶಾಂತಿ ನಗರದ ಐಎಸ್ಡಿ ಪೊಲೀಸ್ ಠಾಣೆಯಲ್ಲಿ ಸೆ. 12 ರಂದು ಕೇರಳ ಮೂಲದ ಇಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿ, ಎಫ್ಐಆರ್ ದಾಖಲಿಸಲಾಗಿತ್ತು. ಕೇರಳ ಮೂಲದ ಪೆಡ್ಲರ್ಗಳಾದ ಡ್ಯಾನಿಯಲ್ ಮತ್ತು ಗೋಕುಲ್ ಕೃಷ್ಣ ಎಂಬ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಸೀರಿಯಲ್ ನಟ-ನಟಿಯರಿಗೆ ಡ್ರಗ್ಸ್ ಪೂರೈಸುತ್ತಿದ್ದ ವಿಚಾರ ಬಾಯಿ ಬಿಟ್ಟಿದ್ದರು. ಹೀಗಾಗಿ ಬಂಧಿತ ಆರೋಪಿಗಳ ಜೊತೆ ನಂಟಿರುವ ಕಿರುತೆರೆ ನಟ-ನಟಿಯರನ್ನು ಐಎಸ್ಡಿ ವಿಚಾರಣೆ ನಡೆಸಿದೆ.
ಇಬ್ಬರು ಪೆಡ್ಲರ್ಗಳಿಗೆ ಬೆಂಗಳೂರು ನಂಟಿರುವುದು ಬಹುತೇಕ ಖಚಿತವಾಗಿದೆ. ಇವರು ಯಾರಿಗೆಲ್ಲ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ಯಾರು ಖರೀದಿ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ಐಎಸ್ಡಿ ಕಲೆ ಹಾಕ್ತಿದೆ.